ಬುಲ್ಡೋಜರ್ ಕಾರ್ಯಾಚರಣೆ ಕುರಿತು ಸರ್ವೋಚ್ಚ ನ್ಯಾಯಾಲಯದ ಹೇಳಿಕೆ
ನವ ದೆಹಲಿ – ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶಗಳಂತಹ ಕೆಲವು ರಾಜ್ಯಗಳಲ್ಲಿ ಆರೋಪಿಗಳ ಮನೆಗಳ ಮೇಲೆ ಬುಲ್ಡೋಜರ ಹಾಯಿಸಿ ಕೆಡವಿರುವ ಪ್ರಕರಣಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ 2 ಅರ್ಜಿಗಳು ದಾಖಲಿಸಲಾಗಿದೆ. ಈ ಕುರಿತು ಸಪ್ಟೆಂಬರ 2 ರಂದು ನಡೆದ ವಿಚಾರಣೆಯ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ `ಇಡೀ ಭಾರತಕ್ಕೆ ಅನ್ವಯವಾಗುವಂತಹ ಮಾರ್ಗಸೂಚಿ ತತ್ವಗಳನ್ನು ಸಿದ್ಧಪಡಿಸಬಹುದು’, ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಹಾಗೆಯೇ `ಸ್ಥಿರಾಸ್ತಿ ಅಕ್ರಮವಾಗಿದ್ದರೆ, ಅದರ ಮೇಲೆ ಕ್ರಮ ಕೈಕೊಳ್ಳಲೇ ಬೇಕು’ ಎಂದೂ ನ್ಯಾಯಾಲಯವು ಈ ಸಮಯದಲ್ಲಿ ಸ್ಪಷ್ಟಪಡಿಸಿತು. `ಕಾಮಗಾರಿ ಅಕ್ರಮವಾಗಿದ್ದರೆ, ಅದನ್ನು ಬೀಳಿಸಬಹುದು’ ಎನ್ನುವ ಉತ್ತರಪ್ರದೇಶ ಸರಕಾರದ ನಿಲುವನ್ನು ನ್ಯಾಯಾಲಯವು ಈ ಸಮಯದಲ್ಲಿ ಶ್ಲಾಘಿಸಿತು. ಈಗ ಈ ಪ್ರಕರಣದ ವಿಚಾರಣೆ ಸಪ್ಟೆಂಬರ 17 ರಂದು ನಡೆಯಲಿದೆ.
1. ರಾಜಸ್ಥಾನದ ರಾಶೀದ ಖಾನ ಮತ್ತು ಮಧ್ಯಪ್ರದೇಶದ ಮಹಮ್ಮದ ಹುಸೇನ ಇವರ ಈ ಅರ್ಜಿಯ ಕುರಿತು ನ್ಯಾಯಾಲಯವು, ಕೇವಲ ಒಬ್ಬ ವ್ಯಕ್ತಿಯ ಮೇಲೆ ಕ್ರಿಮಿನಲ ಅಪರಾಧದ ಆರೋಪ ಇರುವುದರಿಂದಲೇ ಅವನ ಆಸ್ತಿಯನ್ನು ಈ ರೀತಿ ಕೆಡವಲು ಅನುಮತಿ ನೀಡಲಾಗುವುದಿಲ್ಲ. ನಾವು ಸಂಪೂರ್ಣ ಭಾರತದ ಆಧಾರದಲ್ಲಿ ಕೆಲವು ಮಾರ್ಗಸೂಚಿ ತತ್ವಗಳನ್ನು ಮಂಡಿಸುವಂತೆ ಪ್ರಸ್ತಾಪಿಸುತ್ತಿದ್ದೇವೆ. ಒಟ್ಟಾರೆ ವ್ಯಕ್ತಪಡಿಸಿದ ಕಳವಳಗಳನ್ನು ಪರಿಗಣಿಸಲಾಗುವುದು. ಉತ್ತರ ಪ್ರದೇಶ ರಾಜ್ಯವು ಕೈಗೊಂಡ ನಿಲುವನ್ನು ನಾವು ಪ್ರಶಂಸಿಸುತ್ತೇವೆ ಎಂದು ಹೇಳಿದರು ಎಂದು ಹೇಳಿದೆ.
2. ವಿಚಾರಣೆ ವೇಳೆ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮಾತನಾಡಿ, ‘ಆರೋಪಿಯ ಆಸ್ತಿಯನ್ನು ಅವನು ಅಪರಾಧ ಮಾಡಿದ್ದಾನೆಂದು ಕೆಡವಲಾಗಿಲ್ಲ. ಬದಲಾಗಿ ಅಕ್ರಮ ಕೃತ್ಯಗಳನ್ನು ಮಾಡುವ ಆರೋಪಿಯ ಮೇಲೆ ಮಹಾನಗರಪಾಲಿಕೆಯ ಅಧಿನಿಯಮಾನುಸಾರ ಕ್ರಮವನ್ನು ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ. ಉತ್ತರಪ್ರದೇಶ ಸರಕಾರದ ಪರವಾಗಿ ಕಾನೂನಿನಂತೆಯೇ ಮನೆಯ ಮೇಲೆ ಕ್ರಮವನ್ನು ಕೈಕೊಳ್ಳಲಾಗುವುದು ಎಂದು ಪ್ರಮಾಣಪತ್ರವನ್ನು ಹಾಜರು ಪಡಿಸಲಾಗಿತ್ತು.
3. ಉದಯಪುರದ 60 ವರ್ಷದ ಅರ್ಜಿದಾರ ರಾಶೀದ ಖಾನ ಇವರ ಪುತ್ರನು ತನ್ನ ತರಗತಿಯ ಸ್ನೇಹಿತನ ಮೇಲೆ ಚಾಕುವಿನಿಂದ ನಡೆಸಿದ ಹಲ್ಲೆಯಲ್ಲಿ ಅವನ ಸ್ನೇಹಿತನು ಮರಣ ಹೊಂದಿದ್ದನು. ತದನಂತರ ಆಡಳಿತವು ಅವನ ಮನೆಯನ್ನು ಕೆಡವಿತ್ತು. ಹಾಗೆಯೇ ಮಧ್ಯಪ್ರದೇಶದ ಮಹಮ್ಮದ ಹುಸೇನನು ರಾಜ್ಯಾಡಳಿತವು ಅವನ ಮನೆ ಮತ್ತು ಅಂಗಡಿಯನ್ನು ಅಕ್ರಮವಾಗಿ ಕೆಡವಿದೆಯೆಂದು ಆರೋಪಿಸಿದ್ದಾರೆ.