ದಾದರಿ (ಹರಿಯಾಣ)ಇಲ್ಲಿ ಗೋಮಾಂಸ ಸೇವಿಸಿದ ಸಂದೇಹದ ಮೇರೆಗೆ ಸಾಬೀರ ಮಲಿಕ್ ನ ಕೊಲೆ

ಬಂಧಿತ 7 ಜನರಲ್ಲಿ 2 ಅಪ್ರಾಪ್ತರು !

ಚಂಡೀಗಢ – ಹರಿಯಾಣ ರಾಜ್ಯದ ಚರಖಿ ದಾದರಿ ಜಿಲ್ಲೆಯಲ್ಲಿ ಆಗಸ್ಟ್ 27 ರಂದು ನಡೆದ ಘಟನೆಯಲ್ಲಿ, ಕೆಲವರು ಸಬೀರ್ ಮಲಿಕ್ ಎಂಬ ವಲಸಿಗನನ್ನು ಗೋಮಾಂಸ ಸೇವಿಸಿದ್ದಾರೆಂದು ಶಂಕಿಸಿ ಅಮಾನುಷವಾಗಿ ಥಳಿಸಿದ್ದಾರೆ. ಈ ಥಳಿತದಲ್ಲಿ ಆತ ಮೃತಪಟ್ಟಿದ್ದಾನೆ. ಈ ಪ್ರಕರಣದಲ್ಲಿ 7 ಮಂದಿಯನ್ನು ಬಂಧಿಸಲಾಗಿದೆ. ಅವರಲ್ಲಿ ಅಭಿಷೇಕ್, ಮೋಹಿತ್, ರವೀಂದರ್, ಕಮಲಜಿತ್ ಮತ್ತು ಸಾಹಿಲ್ ಹೀಗೆ ಐವರ ಹೆಸರುಗಳಾಗಿದ್ದು, ಇನ್ನಿಬ್ಬರು ಅಪ್ರಾಪ್ತರಾಗಿದ್ದಾರೆ. ಪೊಲೀಸರು ಈ ಘಟನೆಯ ಬಗ್ಗೆ ಮಾಹಿತಿಯನ್ನು ಆಗಸ್ಟ್ 31 ರಂದು ಮಾಧ್ಯಮಗಳಿಗೆ ನೀಡಿದರು.

1. ಓರ್ವ ಹಿರಿಯ ಪೊಲೀಸ್ ಅಧಿಕಾರಿಯು ನೀಡಿದ ಮಾಹಿತಿಯನುಸಾರ, ಸಬೀರನನ್ನು ಆಗಸ್ಟ್ 27 ರಂದು ಗೋಮಾಂಸ ತಿಂದಿರುವ ಸಂಶಯದಿಂದ 7 ಜನ ಆರೋಪಿಗಳು ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಮಾರಾಟ ಮಾಡುವ ನೆಪದಲ್ಲಿ ಅಂಗಡಿಗೆ ಕರೆಸಿದ್ದರು. ಅಲ್ಲಿ ಅವನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದರು.

2. ಪೊಲೀಸ್ ಅಧಿಕಾರಿ ಮಾತನಾಡಿ, ಆರೋಪಿಗಳು ಥಳಿಸುತ್ತಿದ್ದಾಗ ಕೆಲವರು ಮಧ್ಯ ಪ್ರವೇಶಿಸಿದರು. ಇದಾದ ಬಳಿಕ ಅವರು ಸಬೀರ್‌ನನ್ನು ಬೇರೆ ಕಡೆಗೆ ಕರೆದುಕೊಂಡು ಹೋಗಿ ಮತ್ತೆ ಥಳಿಸಿದ್ದಾರೆ. ಇದರಲ್ಲಿ ಆತನು ಮರಣ ಹೊಂದಿದನು ಎಂದು ಹೇಳಿದ್ದಾರೆ.

3. ಮಲಿಕ್ ಚರಖಿ ದಾದರಿ ಜಿಲ್ಲೆಯ ವಾಂದ್ರೆ ಗ್ರಾಮದ ಬಳಿಯ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಜೀವನೋಪಾಯಕ್ಕಾಗಿ ಅವನು ಗುಜರಿ ವಸ್ತುಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದನು. ಭಾರತೀಯ ದಂಡ ಸಂಹಿತೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಗೋಮಾತೆಯ ಮೇಲೆ ಜನರಿಗೆ ಅಪಾರ ಶ್ರದ್ಧೆ ಇರುವುದರಿಂದಲೇ ಇಂತಹ ಘಟನೆಗಳು ನಡೆಯುತ್ತವೆ ! – ಮುಖ್ಯಮಂತ್ರಿ ಸೈನಿ

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಹರಿಯಾಣದ ಭಾಜಪ ಸರಕಾರದ ಮುಖ್ಯಮಂತ್ರಿ ನಾಯಬ ಸಿಂಗ್ ಸೈನಿ ಇವರು, ಗೋವುಗಳ ರಕ್ಷಣೆಗಾಗಿ ನಾವು ಕಠಿಣ ಕಾನೂನು ಮಾಡಿದ್ದೇವೆ. ಇದರಲ್ಲಿ ಯಾವುದೇ ರಾಜಿ ಇಲ್ಲ. ಗೋವಿನ ಮೇಲೆ ಜನರಿಗೆ ನಂಬಿಕೆ ಇದೆ. ಅವರ ಭಾವನೆಗಳು ಗೋವುಗಳೊಂದಿಗೆ ಜೋಡಿಸಲ್ಪಟ್ಟಿದ. ಗೋ ಮಾಂಸಕ್ಕೆ ಸಂಬಂಧಿಸಿದಂತೆ ಇಂತಹ ಮಾಹಿತಿಗಳು ಬೆಳಕಿಗೆ ಬಂದಾಗ ಗ್ರಾಮದವರು ಪ್ರತಿಕ್ರಿಯೆ ವ್ಯಕ್ತ ಪಡಿಸುತ್ತಾರೆ. ಗುಂಪಿನಿಂದ ಹತ್ಯೆಯಂತಹ ಘಟನೆಗಳು ದುರದೃಷ್ಟಕರವಾಗಿದ್ದು, ಇದು ನಡೆಯಬಾರದು ಎಂದೂ ಅವರು ಸ್ಪಷ್ಟ ಪಡಿಸಿದರು.

ಸಂಪಾದಕೀಯ ನಿಲುವು

  • ಈ ರೀತಿ ಹತ್ಯೆ ಮಾಡುವುದು ದುರದೃಷ್ಟಕರ ! ಹರಿಯಾಣದ ವಿಧಾನಸಭಾ ಚುನಾವಣೆಯನ್ನು ನೋಡಿದರೆ ಇಂತಹ ಘಟನೆಗಳು ರಾಜಕೀಯ ಉದ್ದೇಶದಿಂದ ನಡೆದಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಿದ್ದರೂ, ಮೂಲತಃ ಸಾವಿರಾರು ಬಾರಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಮತ್ತು ಅದರ ವಿರುದ್ಧ ಯಾರೂ ಏನನ್ನೂ ಮಾಡಿಲ್ಲ. ಅದರ ಅಂತ್ಯ ಇಂತಹ ಘಟನೆಯಲ್ಲಿ ಆಗಿದೆ ಎಂದು ಯಾರಾದರೂ ಹೇಳಿದರೆ, ಅದಕ್ಕೆ ಏನು ಉತ್ತರಿಸುತ್ತೀರಿ ?
  • 2015 ರಲ್ಲಿ ದಾದರಿಯಲ್ಲಿ ಗೋಮಾಂಸ ಇಟ್ಟುಕೊಂಡಿದ್ದ ಅಕಲಾಖನ ಹತ್ಯೆ ಮಾಡಲಾಗಿತ್ತು. ಆ ಬಳಿಕ ದೇಶಾದ್ಯಂತ ಅಸಹಿಷ್ಣುತೆ ಹೆಚ್ಚಿದೆ ಎಂಬ ಕೂಗು ಎದ್ದಿತ್ತು. ಈಗಲೂ ಅಂತಹ ಷಡ್ಯಂತ್ರ ರಚಿಸಿ ಭಾರತವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆದರೆ ಆಶ್ಚರ್ಯಪಡಬೇಡಿರಿ !