ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಆಯೋಜಿಸಿದ್ದ ಗಣೇಶ ಮಂಡಳಿಗಳ ಸಭೆಯಲ್ಲಿ ಕರೆ !
ಕುಶಾಲನಗರ (ಕೊಡಗು ಜಿ.) : ಸ್ವಾತಂತ್ರ್ಯ ಪೂರ್ವದಲ್ಲಿ ಹಿಂದೂಗಳು ಗಣೇಶ ಚತುರ್ಥಿ ವ್ರತವನ್ನು ತಮ್ಮ ತಮ್ಮ ಮನೆಗಳಲ್ಲಿ ಮಾತ್ರ ಆಚರಿಸುತ್ತಿದ್ದರು, ಆದರೆ ಲೋಕಮಾನ್ಯ ಬಾಲಗಂಗಾಧರ ತಿಲಕ್ ಇವರು ಅಂದಿನ ಕಾಲಕ್ಕೆ ಅವಶ್ಯಕವಿದ್ದಂತೆ ಹಿಂದೂಗಳನ್ನು ಸಂಘಟಿಸುವ ಉದ್ದೇಶದಿಂದ ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಪರಿಕಲ್ಪನೆಯನ್ನು ಸಮಾಜಕ್ಕೆ ನೀಡಿದರು. ಅಂದಿನಿಂದ ಭಾರತದಾದ್ಯಂತ ಗಣೇಶ ಉತ್ಸವವನ್ನು ಸಾರ್ವಜನಿಕವಾಗಿ ಆಚರಿಸಲಾಗುತ್ತಿದೆ, ಆದರೆ ಕಾಲಕ್ರಮೇಣ ಬಾಲಗಂಗಾಧರ ತಿಲಕರು ಯಾವ ಉದ್ದೇಶಕ್ಕಾಗಿ ಇದನ್ನು ಪ್ರಾರಂಭಿಸಿದರೋ ಅದು ಲೋಪವಾಗುತ್ತಾ ಬರುತ್ತಿದೆ. ಹಾಗಾಗಿ ಹಿಂದೂಗಳು ಸಂಘಟಿತರಾಗುವ ಮೂಲಕ ಗಣೇಶೋತ್ಸವದ ಮೂಲ ಉದ್ದೇಶವನ್ನು ಸಾಕಾರಗೊಳಿಸಬೇಕು ಮತ್ತು ಆದರ್ಶ ಗಣೇಶೋತ್ಸವ ಆಚರಿಸುವ ಮೂಲಕ ಶ್ರೀ ಗಣೇಶನ ಕೃಪೆಗೆ ಪಾತ್ರರಾಗಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶ್ರೀನಾಥ್ ಇವರು ಕರೆ ನೀಡಿದರು. ಗಣೇಶೋತ್ಸವ ಉತ್ತಮ ರೀತಿಯಲ್ಲಿ ಮತ್ತು ಕಾನೂನು ಚೌಕಟ್ಟಿನಲ್ಲಿ ನಡೆಯಬೇಕು ಈ ಉದ್ದೇಶದಿಂದ ಕುಶಾಲನಗರ ಪೊಲೀಸ್ ಠಾಣೆ ವತಿಯಿಂದ ತಮ್ಮ ಠಾಣಾ ವ್ಯಾಪ್ತಿಯಲ್ಲಿನ ಗಣೇಶೋತ್ಸವ ಆಯೋಜಕರ ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ‘ಆದರ್ಶ ಗಣೇಶೋತ್ಸವ’ ಆಚರಣೆ ಕುರಿತು ಮಾಹಿತಿ ನೀಡಲು ಹಿಂದೂ ಜನಜಾಗೃತಿ ಸಮಿತಿಯನ್ನೂ ಆಹ್ವಾನಿಸಲಾಗಿತ್ತು. ಸಭೆಯಲ್ಲಿ 20 ಕೂ ಅಧಿಕ ಮಂಡಳಿಗಳ 38 ಸದಸ್ಯರು ಉಪಸ್ಥಿತರಿದ್ದರು. ಪೊಲೀಸ್ ಉಪನಿರೀಕ್ಷಕರು ಉಪಸ್ಥಿತರಿದ್ದವರಿಗೆ ಕಾನೂನಿನ ಪ್ರಕಾರ ಏನೆಲ್ಲ ಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.
(ಸೌಜನ್ಯ – chithaara channel)
ಶ್ರೀ. ಶ್ರೀನಾಥ್ ಇವರು ಮುಂದೆ ಮಾತನಾಡಿ ನಾವು ಕೂರಿಸುವ ಗಣೇಶನ ಮೂರ್ತಿ ಸಾತ್ತ್ವಿಕವಾಗಿರಬೇಕು, ಮಂಟಪವು ಅತ್ಯಂತ ದೊಡ್ಡದಾಗಿರದೆ ಚಿಕ್ಕ ಮತ್ತು ವ್ಯವಸ್ಥಿತವಾಗಿರಬೇಕು, ಮಂಟಪದಲ್ಲಿ ಕರ್ಣ ಕರ್ಕಶ ಡಿ.ಜೆ ಯಿಂದ ಮಕ್ಕಳು ಮತ್ತು ವಯಸ್ಕರ ಆರೋಗ್ಯಕ್ಕೆ ಕುತ್ತು ತರುವುದಲ್ಲದೆ ದೇವತೆಯ ಅಪಮಾನವೂ ಆಗುತ್ತದೆ, ಆದ್ದರಿಂದ ಸಾತ್ವಿಕ ಭಜನೆಗಳನ್ನೇ ಮಂಟಪದಲ್ಲಿ ಹಾಕೋಣ ಮತ್ತು ಮಂಟಪಕ್ಕೆ ಬರುವ ಎಲ್ಲ ಭಕ್ತಾದಿಗಳಿಗೆ ಶ್ರೀಗಣೇಶನ ಉಪಾಸನೆಯ ಮಹತ್ವ ತಿಳಿಸಿ ಅಖಂಡ ಶ್ರೀ ಗಣೇಶನ ನಾಮಜಪ ಮಾಡಲು ತಿಳಿಸೋಣ, ಈ ರೀತಿ ಗಣೇಶೋತ್ಸವ ಆಚರಣೆ ಮಾಡುವುದರಿಂದ ನಮ್ಮ ಮೇಲೆ ಶ್ರೀ ಗಣೇಶನ ಕೃಪೆಯಾಗುತ್ತದೆ ಹಾಗೂ ನಮ್ಮ ಆಧ್ಯಾತ್ಮಿಕ ಬಲ ವೃದ್ಧಿಯಾಗುತ್ತದೆ ಎಂದರು.
ಉಪಸ್ಥಿತ ಗಣೇಶ ಮಂಡಳಿಯ ಸದಸ್ಯರು ಅತ್ಯಂತ ಶಾಂತವಾಗಿ ವಿಷಯಗಳನ್ನು ಕೇಳಿದರು. ಕೆಲವರು ತಮಗೆ ಈ ಮೊದಲು ಈ ವಿಷಯಗಳು ತಿಳಿದಿರಲಿಲ್ಲ, ಸಾಧ್ಯವಾದಷ್ಟು ಆದರ್ಶವಾಗಿ, ಶಾಸ್ತ್ರೀಯವಾಗಿ ಗಣೇಶೋತ್ಸವವನ್ನು ಆಚರಿಸಲು ಪ್ರಯತ್ನ ಮಾಡುವುದಾಗಿ ತಿಳಿಸಿದರು. ಹಿಂದೂ ಜನಜಾಗೃತಿ ಸಮಿತಿಯು ಕಳೆದ 22 ವರ್ಷಗಳಿಂದ ಸಮಾಜದಲ್ಲಿ ಆದರ್ಶ ಗಣೇಶೋತ್ಸವ ಆಚರಣೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು ಈ ನಿಮಿತ್ತ ಪ್ರವಚನಗಳನ್ನು ಆಯೋಜಿಸುವುದು, ಗಣೇಶ ಮಂಡಳಿಗಳಿಗೆ ಭೇಟಿ ನೀಡಿ ಮನವಿಗಳನ್ನು ಸಲ್ಲಿಸುವುದು, ಆಡಳಿತ ಕಛೇರಿಗಳಿಗೆ ಮನವಿ ಸಲ್ಲಿಸುವುದು ಇಂತಹ ಜಾಗೃತಿ ಕಾರ್ಯ ಮಾಡುತ್ತಿದೆ.