ಇನ್ನು ಅತ್ಯಾಚಾರಿಗಲಿಗೆ ಉಳಿಗಾಲ ಇಲ್ಲ; ಕಠಿಣ ಕಾನೂನು ಜಾರಿ ! – ನರೇಂದ್ರ ಮೋದಿ

  • ಈಗ ಮಹಿಳೆಯರು ಮನೆಯಿಂದಲೇ ದೂರು ದಾಖಲಿಸಬಹುದು!

  • ಮಹಿಳೆಯರ ಮೇಲಿನ ಅತ್ಯಾಚಾರ ತಡೆಯಲು ರಾಜ್ಯ ಸರಕಾರದ ಜೊತೆ ನಾವಿದ್ದೇವೆ !

  • ಪ್ರಧಾನಿ ನರೇಂದ್ರ ಮೋದಿ ಅವರಿಂದ ‘ಲಖಪತಿ ದೀದಿ’ ಯೋಜನೆಗೆ ಚಾಲನೆ !

ಜಲಗಾಂವ್ – ಇನ್ಮುಂದೆ ಮಹಿಳೆಯರು ಮನೆಯಲ್ಲಿ ಕುಳಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು. ಮಹಿಳೆಯರ ಮೇಲಿನ ಅತ್ಯಾಚಾರ ತಡೆಯಲು ನಾವು ರಾಜ್ಯ ಸರಕಾರದ ಜೊತೆ ನಿಲ್ಲುತ್ತೇವೆ. ಅತ್ಯಾಚಾರಿಗಳಿಗೆ ಶಿಕ್ಷೆಗೆ ಕಠಿಣ ಕಾನೂನು ರೂಪಿಸುತ್ತೇವೆ. ಮಹಿಳೆಯರ ಮೇಲೆ ಅತ್ಯಾಚಾರ ಮಾಡುವ ಅಪರಾಧಿಗಳ ಉಳಿಗಾಲ ಇಲ್ಲ. ಅವರನ್ನು ಶಿಕ್ಷಿಸಲು ಕಠಿಣ ಕಾನೂನು ರೂಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಪ್ರತಿಪಾದಿಸಿದರು. ಜಲಗಾಂವ್‌ನಲ್ಲಿ ಆಗಸ್ಟ್ 25 ರಂದು ‘ಲಖಪತಿ ದೀದಿ’ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದರು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.

ಮರಾಠಿಯಲ್ಲಿ ಭಾಷಣ ಆರಂಭಿಸಿದ ಮೋದಿ, ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ನೇಪಾಳದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. 11 ಲಕ್ಷ ‘ಲಖಪತಿ ದೀದಿ”ಗಳಿಗೆ ಪ್ರಮಾಣಪತ್ರಗಳನ್ನು ಮೋದಿ ವಿತರಿಸಿದರು. ಇದಕ್ಕೂ ಮುನ್ನ ಅಲ್ಲಿನ ಮಹಿಳೆಯರೊಂದಿಗೆ ಮೋದಿ ಸಂವಾದ ನಡೆಸಿದರು. ಈ ಕಾರ್ಯಕ್ರಮವನ್ನು ಇಲ್ಲಿನ ‘ಪ್ರೈಮ್ ಇಂಡಸ್ಟ್ರಿಯಲ್ ಪಾರ್ಕ್’ನಲ್ಲಿ ಆಯೋಜಿಸಲಾಗಿತ್ತು.