ಬ್ಯಾಂಕಾಕ (ಥಾಯ್ಲೆಂಡ) – ಬಾಂಗ್ಲಾದೇಶದ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ವಿವಿಧ ಸಂಘಟನೆಗಳ 300 ಕ್ಕೂ ಹೆಚ್ಚು ಸದಸ್ಯರು ಬ್ಯಾಂಕಾಕ್ ನಗರದ ಬಾಂಗ್ಲಾದೇಶದ ರಾಯಭಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ವಿಶ್ವ ಹಿಂದೂ ಪರಿಷತ್, ಹಿಂದೂ ಸ್ವಯಂಸೇವಕ ಸಂಘ, ವಿಷ್ಣು ಮಂದಿರ, ಸತ್ಯ ಸಾಯಿ ಫೌಂಡೇಶನ್, ಗೀತಾ ಆಶ್ರಮ ಸೇರಿದಂತೆ ಕೆಲವು ಅಂತರರಾಷ್ಟ್ರೀಯ ಸಂಸ್ಥೆಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು. ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಈ ಚಳುವಳಿಯನ್ನು ನಡೆಸಲಾಯಿತು.
ಬಾಂಗ್ಲಾದೇಶದ ವಿದ್ಯಾರ್ಥಿಗಳ ಚಳವಳಿಯು ಇಸ್ಲಾಮಿ ರೂಪವನ್ನು ಪಡೆದುಕೊಂಡಿದೆ ಮತ್ತು ಸ್ಥಳೀಯ ಬಾಂಗ್ಲಾದೇಶದ ಪ್ರಜೆಗಳಾದ ಹಿಂದೂಗಳನ್ನು ಗುರಿಯಾಗಿಸುತ್ತಿದೆ. ಬಾಂಗ್ಲಾದೇಶದ ಆಡಳಿತಗಾರರು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ತಕ್ಷಣವೇ ನಿಲ್ಲಿಸಬೇಕು, ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಮತ್ತು ದೇಶದ ಇತರ ನಾಗರಿಕರಿಗೆ ಸಮಾನವಾದ ಹಕ್ಕುಗಳನ್ನು ನೀಡಬೇಕು ಎಂದು ಈ ಸಮಯದಲ್ಲಿ ಒತ್ತಾಯಿಸಲಾಯಿತು. ಪ್ರತಿಭಟನಾಕಾರರು ಹಿಂದೂ ದೇವಸ್ಥಾನಗಳ ಮೇಲಿನ ದಾಳಿ, ಹಿಂದೂಗಳ ನರಮೇಧ, ಹಿಂದೂ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಬರ್ಬರ ಹತ್ಯೆಯಂತಹ ಘಟನೆಗಳ ಬಗ್ಗೆ ಧ್ವನಿ ಎತ್ತಿದರು.
ಪ್ರತಿಭಟನಾಕಾರರು ಬಾಂಗ್ಲಾದೇಶದ ರಾಯಭಾರಿ ಕಚೇರಿಯ ಅಧಿಕಾರಿ ಹಸನತ ಅಹ್ಮದ ಅವರನ್ನು ಭೇಟಿ ಮಾಡಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿ ಮನವಿಯನ್ನು ಹಸ್ತಾಂತರಿಸಿದರು. ವಿಶ್ವ ಹಿಂದೂ ಪರಿಷತ ಧರ್ಮದರ್ಶಿ ಶ್ರೀ. ಸುಶೀಲ ಸರಾಫ, ಕಾರ್ಯದರ್ಶಿ ಶ್ರೀ. ಜೈ ಶಂಕರ, ಗೀತಾ ಆಶ್ರಮದ ಶ್ರೀ. ದಿನೇಶ ಪಾಂಡೆ ಇವರು ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.