ವಿದೇಶಿ ಸೈಬರ್ ಕ್ರಿಮಿನಲ್ ಗಳಿಗೆ ಸಿಮ್ ಕಾರ್ಡ್ ಮಾರಾಟ ಮಾಡುತ್ತಿರುವುದು ಬಹಿರಂಗ !
ಮಂಗಳೂರು – ವಿದೇಶದಲ್ಲಿರುವ ಸೈಬರ್ ಕ್ರಿಮಿನಲ್‌ಗಳಿಗೆ ಸಿಮ್ ಕಾರ್ಡ್ ಸಂಗ್ರಹಿಸುತ್ತಿದ್ದ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮುಹಮ್ಮದ್ ಸಮರ್ (26 ವರ್ಷ) ಮತ್ತು ಮುಹಮ್ಮದ್ ಅಜೀಮ್ (19 ವರ್ಷ) ಎಂದು ಗುರುತಿಸಲಾಗಿದೆ. ಈ ಆರೋಪಿಗಳಿಂದ ಏರ್ ಟೆಲ್ ಸಂಸ್ಥೆಯ 86 ಸಿಮ್ ಕಾರ್ಡ್, 2 ಮೊಬೈಲ್ ಫೋನ್ ಸೆಟ್, 1 ಕಾರು ಸೇರಿದಂತೆ 5 ಲಕ್ಷ 49 ಸಾವಿರದ 300 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿಗಳು ಪರಿಚಯಸ್ಥರ ಹೆಸರಿನಲ್ಲಿ ಮೊಬೈಲ್ ಸಿಮ್ ಕಾರ್ಡ್ ಪಡೆದು ವಿದೇಶದಲ್ಲಿರುವ ಸೈಬರ್ ಅಪರಾಧಿಗಳಿಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳು ಇದುವರೆಗೆ 400 ರಿಂದ 500 ಸಿಮ್ ಕಾರ್ಡ್ ಸಂಗ್ರಹಿಸಿ ವಿದೇಶಕ್ಕೆ ಕಳುಹಿಸಿದ್ದಾರೆ. (ಇದು ಭದ್ರತಾ ವ್ಯವಸ್ಥೆಗಳ ವೈಫಲ್ಯವಲ್ಲವೇ? – ಸಂಪಾದಕರು)
ಕಳೆದ ಫೆಬ್ರವರಿಯಲ್ಲಿ ಧರ್ಮಸ್ಥಳ ಪೊಲೀಸರು 5 ಮಂದಿಯನ್ನು ಬಂಧಿಸಿ ಅವರಿಂದ 42 ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಂಡಿದ್ದರು. ಮಂಗಳೂರು ನಗರ ಪೊಲೀಸರು ಬಂಧಿಸಿರುವ ಆರೋಪಿಗಳು ಧರ್ಮಸ್ಥಳದಲ್ಲಿ ಬಂಧಿತ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.