Modi Secular Civil Code : ದೇಶದಲ್ಲಿ ಜಾತ್ಯತೀತ ನಾಗರಿಕ ಕಾನೂನಿನ ಅಗತ್ಯತೆ !

ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಿಂದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ !

ನವದೆಹಲಿ – ಸಮಾನ ನಾಗರಿಕ ಕಾನೂನಿನ ಬಗ್ಗೆ ಸುಪ್ರೀಂ ಕೋರ್ಟ್ ಸತತವಾಗಿ ವಿಚಾರಣೆ ನಡೆಸುತ್ತಿದೆ. ಈ ಬಗ್ಗೆ ಚರ್ಚಿಸಲಾಗಿದೆ. ಆದ್ದರಿಂದ ಸಂವಿಧಾನ ರಚನೆಕಾರರ ಕನಸನ್ನು ನನಸು ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಬಗ್ಗೆ ದೇಶದಲ್ಲಿ ವ್ಯಾಪಕ ಚರ್ಚೆಯಾಗಬೇಕು. ಈ ನಿಟ್ಟಿನಲ್ಲಿ ಸೂಚನೆಗಳು ಬರಬೇಕು. ದೇಶದಲ್ಲಿ ನಾವು ಧಾರ್ಮಿಕ ನಾಗರಿಕ ಕಾಯ್ದೆಯಲ್ಲಿ(‘ಕೋಮು ನಾಗರಿಕ ಸಂಹಿತೆ’) 75 ವರ್ಷಗಳನ್ನು ಕಳೆದಿದ್ದೇವೆ. ಈಗ ದೇಶಕ್ಕೆ ಜಾತ್ಯತೀತ ನಾಗರಿಕ ಕಾಯ್ದೆ(‘ಸೆಕ್ಯುಲರ್ ಸಿವಿಲ್ ಕೋಡ್’) ಅಗತ್ಯವಿದೆ. ಆಗ ಮಾತ್ರ ನಮಗೆ ಧರ್ಮದ ಆಧಾರದ ಮೇಲೆ ಆಗುವ ತಾರತಮ್ಯದಿಂದ ಮುಕ್ತಿ ಸಿಗುವುದು, ಎಂದು ಪ್ರಧಾನಿ ಮೋದಿಯವರು ದೇಶದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕೆಂಪು ಕೋಟೆಯಲ್ಲಿ ಮಾತನಾಡುತ್ತಾ ಹೇಳಿದರು.

ಪ್ರಧಾನಿ ಮೋದಿ ಮಂಡಿಸಿದ ಸೂತ್ರಗಳು

1. ಬಾಂಗ್ಲಾದೇಶದಲ್ಲಿ ಹಿಂದೂಗಳ ಸುರಕ್ಷತೆಯನ್ನು ಖಾತ್ರಿಪಡಿಸಬೇಕು !

ನೆರೆಯ ರಾಷ್ಟ್ರವಾಗಿ, ಬಾಂಗ್ಲಾದೇಶದಲ್ಲಿ ಏನಾಗುತ್ತಿದೆ ಎಂಬ ಆತಂಕ ನಿರ್ಮಾಣವಾಗುವುದು ಸಹಜವಾಗಿದೆ. ಅಲ್ಲಿನ ಪರಿಸ್ಥಿತಿ ಶೀಘ್ರದಲ್ಲೇ ಸಹಜ ಸ್ಥಿತಿಗೆ ಮರಳಲಿದೆ ಎಂದು ನಾನು ಭಾವಿಸುತ್ತೇನೆ. ಅಲ್ಲಿನ ಹಿಂದೂ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಭದ್ರತೆಯನ್ನು ಖಾತ್ರಿಪಡಿಸಬೇಕು ಎಂದು ನಮ್ಮ 140 ಕೋಟಿ ದೇಶವಾಸಿಗಳಿಗೆ ಅನಿಸುತ್ತದೆ. (ಈಗಿನ ಬಾಂಗ್ಲಾದೇಶದ ರಾಜಕಾರಣಿಗಳಿಂದ ಇದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಭಾರತವೇ ಇದರ ನೇತೃತ್ವ ವಹಿಸಬೇಕು, ಇಲ್ಲದಿದ್ದರೆ ಅಲ್ಲಿನ ಹಿಂದೂಗಳು ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ! – ಸಂಪಾದಕರು) ನಮ್ಮ ದೇಶ ಶಾಂತಿಗೆ ಸಮರ್ಪಿತ ದೇಶವಾಗಿದೆ. ಬಾಂಗ್ಲಾದೇಶ ಕೂಡ ಸಂತೋಷ ಮತ್ತು ಶಾಂತಿಯ ಹಾದಿಯಲ್ಲಿ ನಡೆಯಲಿ ಎಂದು ನಾವು ಭಾವಿಸುತ್ತೇವೆ. ಬಾಂಗ್ಲಾದೇಶದ ಅಭಿವೃದ್ಧಿಯ ಪ್ರಯಾಣಕ್ಕೆ ನಾವು ಅವರಿಗೆ ಶುಭ ಹಾರೈಸುತ್ತೇವೆ; ಏಕೆಂದರೆ ನಾವು ಮನುಕುಲದ ಕಲ್ಯಾಣದ ಚಿಂತನೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದೇವೆ.

2. ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವವರನ್ನು ಗಲ್ಲಿಗೇರಿಸಲೇಬೇಕು !

ನಮ್ಮ ತಾಯಂದಿರು ಮತ್ತು ಸಹೋದರಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ನಮಗೆ ಅದು ಅರಿವಾಗುತ್ತದೆ. ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರಿಗೆ ಆದಷ್ಟು ಬೇಗ ಶಿಕ್ಷೆಯಾಗಬೇಕು. ಅವರನ್ನು ಗಲ್ಲಿಗೇರಿಸಬೇಕು. ಈ ಭಯವನ್ನು ಸೃಷ್ಟಿಸಬೇಕು. (ಇದಕ್ಕಾಗಿ ದೇಶದಲ್ಲಿ ಇಂತಹ ದೌರ್ಜನ್ಯಗಳಿಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಕೇಂದ್ರ ಸರಕಾರವು ನೇತೃತ್ವ ವಹಿಸುವುದು ಅಗತ್ಯವಾಗಿದೆ ಮತ್ತು ನಿರ್ದಿಷ್ಟ ಅವಧಿಯೊಳಗೆ ಇಂತಹ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥ ಮಾಡುವಂತಹ ವ್ಯವಸ್ಥೆ ನಿರ್ಮಿಸುವುದು ಅವಶ್ಯಕವಾಗಿದೆ ! – ಸಂಪಾದಕರು)

3. ದೇಶದ ಜನರ ಮನಸ್ಸು ಆತ್ಮಸ್ಥೈರ್ಯ ತುಂಬಿದೆ !

ಈ ಹಿಂದೆ ಭಾರತದಲ್ಲಿ ಭಯೋತ್ಪಾದಕರು ಬಂದು ಹಲವಾರು ಜನರನ್ನು ಕೊಲ್ಲುತ್ತಿದ್ದರು. ಈಗ ದೇಶದ ಸೇನೆಯು ‘ಸರ್ಜಿಕಲ್ ಸ್ಟ್ರೈಕ್’ (ಉದ್ದೇಶಿತ ದಾಳಿ), ‘ಏರ್ ಸ್ಟ್ರೈಕ್’ (ವೈಮಾನಿಕ ದಾಳಿ) ನಡೆಸುತ್ತದೆ. ಇದರಿಂದ ದೇಶದ ಯುವಕರು ಹೆಮ್ಮೆ ಪಡುವಂತಾಗಿದೆ. ಇಂದು ದೇಶದ ಜನರ ಮನಸ್ಸು ಹೆಮ್ಮೆ ಮತ್ತು ಆತ್ಮವಿಶ್ವಾಸದಿಂದ ತುಂಬಿದೆ. (ಆದರೆ ಜಮ್ಮು-ಕಾಶ್ಮೀರದಲ್ಲಿ ಇಂದಿಗೂ ಭಯೋತ್ಪಾದಕರು ನುಗ್ಗಿ ಜನರನ್ನು ಕೊಲ್ಲುತ್ತಿದ್ದಾರೆ, ಸೈನಿಕರೂ ವೀರ ಮರಣವನ್ನಪ್ಪುತ್ತಿದ್ದಾರೆ, ಇದು ವಸ್ತುಸ್ಥಿತಿಯಾಗಿದೆ ! – ಸಂಪಾದಕರು)

4. ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಮಾಡಬೇಕು !

ದೇಶದ ನಾಗರಿಕರು ತಮ್ಮಲ್ಲಿ ಕರ್ತವ್ಯ ಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳಬೇಕು. ಸರಕಾರದಿಂದ ನಾಗರಿಕರವರೆಗೂ ಪ್ರತಿಯೊಬ್ಬರದ್ದು ಕರ್ತವ್ಯವಿದೆ. 140 ಕೋಟಿ ದೇಶವಾಸಿಗಳಿಗೂ ಕರ್ತವ್ಯವಿದೆ. ನಾವು ನಮ್ಮ ಕರ್ತವ್ಯವನ್ನು ಮಾಡಿದರೆ, ಹಕ್ಕುಗಳ ಸಂರಕ್ಷಣೆ ತಾನಾಗಿಯೇ ಆಗುತ್ತದೆ. ಅದಕ್ಕಾಗಿ ಪ್ರತ್ಯೇಕ ಪ್ರಯತ್ನ ಮಾಡುವ ಅಗತ್ಯವಿಲ್ಲ.

5. ಸರಕಾರಕ್ಕೆ ಪತ್ರ ಬರೆದು ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಿ !

ನೀವು ಎದುರಿಸುವ ಯಾವುದೇ ಸಣ್ಣ-ಪುಟ್ಟ ಸಮಸ್ಯೆಗಳ ಬಗ್ಗೆ ಸರಕಾರಕ್ಕೆ ಪತ್ರ ಬರೆಯುವಂತೆ ಯುವಕರು ಮತ್ತು ಪ್ರಾಧ್ಯಾಪಕರಿಗೆ ನಾನು ಕರೆ ನೀಡುತ್ತಿದ್ದೇವೆ. ಆ ಸಮಸ್ಯೆಗಳಿಗೆ ತಕ್ಕ ಪರಿಹಾರವನ್ನೂ ನಮಗೆ ಸೂಚಿಸಿ. ನಮ್ಮ ಸರಕಾರ ಸೂಕ್ಷ್ಮವಾಗಿದೆ. ಸ್ಥಳೀಯ ಸ್ವರಾಜ್ಯ ಸಂಸ್ಥೆಯಾಗಲಿ, ರಾಜ್ಯ ಸರಕಾರವಾಗಲಿ ಅಥವಾ ಕೇಂದ್ರ ಸರಕಾರವಾಗಲಿ ನಿಮ್ಮ ಪತ್ರವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ನನಗೆ ಖಾತ್ರಿಯಿದೆ ಎಂದು ಪ್ರಧಾನಿ ಭರವಸೆ ನೀಡಿದರು. (ಆದರೆ ವಾಸ್ತವತೆ ಬೇರೇನೇ ಇದೆ. ಸಾರ್ವಜನಿಕರ ಅಹವಾಲು, ಸಮಸ್ಯೆಗಳಿಗೆ ಸರ್ಕಾರ, ಪೊಲೀಸರು ಕಿಂಚಿತ್ತೂ ಗಮನ ಹರಿಸುವುದಿಲ್ಲ. ಅನೇಕ ವರ್ಷಗಳಿಂದ ಜನರು ಇದನ್ನೇ ಅನುಭವಿಸುತ್ತಿದ್ದಾರೆ !- ಸಂಪಾದಕರು).