ಚರ್ಚೆಯ ನಂತರ, ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಪರಿಶೀನನೆಗಾಗಿ ಕಳುಹಿಸಲಾಯಿತು !
ನವ ದೆಹಲಿ – ಲೋಕಸಭೆಯಲ್ಲಿ ಆಗಸ್ಟ್ 8 ರಂದು ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಯಿತು. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಈ ಮಸೂದೆಯನ್ನು ಮಂಡಿಸಿದರು. ದಿನವಿಡೀ ಆಡಳಿತ ಮತ್ತು ವಿರೋಧ ಪಕ್ಷಗಳು ತಮ್ಮ ಅಭಿಪ್ರಾಯವನ್ನು ಮಂಡಿಸಿದವು. ಈ ಸಂದರ್ಭದಲ್ಲಿ ಕೆಲವು ಸಮಯ ಗದ್ದಲ ನಡೆಯಿತು. ತದನಂತರ ಕೊನೆಗೆ ಈ ಮಸೂದೆಯನ್ನು ಸಂಯುಕ್ತ ಸಂಸದೀಯ ಸಮಿತಿಗೆ ಕಳುಹಿಸುವ ಪ್ರಸ್ತಾವನೆಯನ್ನು ಸ್ವತಃ ರಿಜಿಜು ಅವರು ಮಂಡಿಸಿದರು. ಈ ಸಂದರ್ಭದಲ್ಲಿ ಲೋಕಸಭೆಯ ಅಧ್ಯಕ್ಷರು ‘ಆದಷ್ಟು ಬೇಗನೆ ಸಮಿತಿಯನ್ನು ಸ್ಥಾಪಿಸುತ್ತೇವೆ’ ಎಂದು ಹೇಳಿದರು.
ಬೆಳಿಗ್ಗೆ, ರಿಜಿಜು ಅವರು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದರು ಮತ್ತು ಅದನ್ನು ವಿರೋಧ ಪಕ್ಷಗಳು ಟೀಕಿಸಿದವು. ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಅವರು ‘ಸಂವಿಧಾನವು ಜನರಿಗೆ ನೀಡಿರುವ ಧರ್ಮ ಮತ್ತು ಮೂಲಭೂತ ಹಕ್ಕುಗಳ ಮೇಲಿನ ನೇರ ದಾಳಿಯಾಗಿದೆ’ ಎಂದು ಆರೋಪಿಸಿದರು. ಇದಾದ ಬಳಿಕ ದ್ರಮುಕನ ಕನಿಮೋಳಿ, ಸಮಾಜವಾದಿ ಪಕ್ಷದ ಅಖಿಲೇಶ ಯಾದವ, ರಾಷ್ಟ್ರವಾದಿ ಕಾಂಗ್ರೆಸ್‌ನ (ಶರದ್ ಪವಾರ್ ಗುಂಪು) ಸುಪ್ರಿಯಾ ಸುಳೆ ಮುಂತಾದವರು ಈ ಮಸೂದೆಯ ವಿರುದ್ಧ ಮಾತನಾಡಿದರು. ನಿತೀಶ ಕುಮಾರ ಅವರ ಜನತಾ ದಳ (ಸಂಯುಕ್ತ) ಇವರ ಸಂಸದರು ಮಸೂದೆಯನ್ನು ಬೆಂಬಲಿಸಿದರು. ಹಾಗೆಯೇ ಶಿವಸೇನೆ (ಶಿಂಧೆ ಗುಂಪು) ಸಂಸದ ಡಾ. ಶ್ರೀಕಾಂತ್ ಶಿಂದೆ ಕೂಡ ಬೆಂಬಲ ವ್ಯಕ್ತಪಡಿಸಿದರು. ಇದಾದ ಬಳಿಕ ಪ್ರತಿಪಕ್ಷಗಳಿಗೆ ಪ್ರತಿಕ್ರಿಯಿಸಿದ ಕಿರಣ್ ರಿಜಿಜು, ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸುವಂತೆ ಸ್ಪೀಕರ್‌ಗೆ ಮನವಿ ಮಾಡಿದರು.