|
ಮುಂಬಯಿ – ಭಾರತದ ಉದಾರ ನೀತಿಯ ದುರುಪಯೋಗ ಪಡಿಸಿಕೊಳ್ಳಬೇಡಿ. ಪಾಕಿಸ್ತಾನ ಅಥವಾ ಗಲ್ಫ್ ದೇಶಗಳಿಗೆ ಹೋಗಿ. ನೀವು ಪ್ರಪಂಚದ 129 ದೇಶಗಳಿಗೆ ಹೋಗಬಹುದು. ನೀವು ಆಸ್ಟ್ರೇಲಿಯಾಕ್ಕೆ ಏಕೆ ಹೋಗಬೇಕೆಂದು ಬಯಸುತ್ತೀರಿ ? ಎಂದು ಕಟುವಾದ ಶಬ್ದಗಳಲ್ಲಿ ಬಾಂಬೆ ಉಚ್ಚ ನ್ಯಾಯಾಲಯವು 10 ವರ್ಷಗಳಿಂದ ತನ್ನ ಕುಟುಂಬದೊಂದಿಗೆ ಪುಣೆಯಲ್ಲಿ ನೆಲೆಸಿರುವ ಯೆಮೆನ್ ದೇಶದ ನಿರಾಶ್ರಿತ ಖಾಲೀದ್ ಹುಸೇನ್ ಎಂಬಾತನನ್ನು ಪ್ರಶ್ನಿಸಿದೆ.
ಹುಸೇನ್ ವಾಸ್ತವ್ಯದ ಅವಧಿ ಮುಗಿದ ಕಾರಣ ದೇಶವನ್ನು ತೊರೆಯುವಂತೆ ಪುಣೆ ಪೋಲೀಸ್ ನೋಟಿಸ್ ನೀಡಿತ್ತು; ಆದರೆ ಇದರ ವಿರುದ್ಧ ಹುಸೇನ್ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದನು. ಈ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯವು ಈ ರೀತಿ ಛೀಮಾರಿ ಹಾಕಿತು.
ನಾನು ಶೀಘ್ರದಲ್ಲೇ ಆಸ್ಟ್ರೇಲಿಯಾಕ್ಕೆ ಹೋಗುತ್ತೇನೆ.ಅದರ ವೀಸಾ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲಿಯವರೆಗೂ ನನಗೆ ಭಾರತದಲ್ಲಿಯೇ ಇರಲು ಬಿಡಿ. ವಿದೇಶಿ ದಂಪತಿಗಳ ಮಗು ಇಲ್ಲಿ ಜನಿಸಿದ ನಂತರ ಭಾರತೀಯ ಪೌರತ್ವವನ್ನು ಪಡೆಯುತ್ತದೆ; ಆದರೆ ನಮ್ಮ ಮಕ್ಕಳಿಗೆ ಏಕೆ ಇಲ್ಲಿನ ಪೌರತ್ವ ನೀಡಿಲ್ಲ?” ಎಂದು ಹುಸೇನ್ ಪ್ರತಿವಾದಿಸಿದ್ದನು.
ಈ ಅರ್ಜಿಯನ್ನು ತೀವ್ರವಾಗಿ ವಿರೋಧಿಸಿದ ಸರಕಾರಿ ನ್ಯಾಯವಾದಿ ಸಂದೇಶ್ ಪಾಟೀಲ್ ಅವರು ಮಾತನಾಡಿ ”ಹುಸೇನ್ ಹಲವು ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ; ಆದರೆ ನಿರಾಶ್ರಿತರಾಗಿರುವ ಅವರು ನಿಯಮಗಳ ಪ್ರಕಾರ ಭಾರತದಲ್ಲಿರುವಂತಿಲ್ಲ. ಅವರ ಕುಟುಂಬವೂ ಭಾರತದಲ್ಲಿ ಅಕ್ರಮವಾಗಿ ನೆಲೆಸಿದೆ. ಹಾಗಾಗಿ ಅವರ ಮಕ್ಕಳಿಗೆ ಇಲ್ಲಿನ ಪೌರತ್ವ ನೀಡಲು ಸಾಧ್ಯವಿಲ್ಲ,’’ ಎಂದು ಸ್ಪಷ್ಟವಾಗಿ ಹೇಳಿದರು.
ಏನಿದು ಪ್ರಕರಣ ?
2014-15ರಲ್ಲಿ ಯೆಮೆನ್‌ನಲ್ಲಿ ಅಂತರ್ಯುದ್ಧ ಪ್ರಾರಂಭವಾಗಿತ್ತು. ಆಗ ಅಲ್ಲಿನ ಅನೇಕ ನಾಗರಿಕರು ತಮ್ಮ ದೇಶವನ್ನು ತೊರೆದು ಬೇರೆ ಬೇರೆ ದೇಶಗಳಿಗೆ ಪಲಾಯನಗೊಂಡರು. ಅದೇ ಸಮಯದಲ್ಲಿ, ಖಾಲೀದ್ ಹುಸೇನ್ ಅವರ ಪತ್ನಿ ತನ್ನ ಸಹೋದರಿಯ ಕ್ಯಾನ್ಸರ್ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದರು. ಅವರಿಗೆ ಆಗ ವೀಸಾ ಸಿಕ್ಕಿತ್ತು. ನಂತರ ಹುಸೇನ್ ಭಾರತದಲ್ಲಿ ಅಧ್ಯಯನ ಮಾಡಲು ಬಂದನು; ಆಗ ಅವನ ಬಳಿ ಅಧ್ಯಯನದ ವೀಸಾ ಇತ್ತು. ಯುದ್ಧದ ಕಾರಣ, ಹುಸೇನ್ ಅವರ ಕುಟುಂಬವು ಭಾರತದಲ್ಲಿಯೇ ಉಳಿಯಬೇಕಾಯಿತು. ಕಾಲಕ್ರಮೇಣ ಅವನು ನಿರಾಶ್ರಿತರ ಪ್ರಮಾಣಪತ್ರವನ್ನು ಪಡೆದನು. ಆಗ ಅವನಿಗೆ ಒಬ್ಬ ಮಗ ಮತ್ತು ಮಗಳು ಹುಟ್ಟಿದರು. ಆದರೆ ಇದೀಗ ಪುಣೆ ಪೊಲೀಸರು ದೇಶ ತೊರೆಯುವಂತೆ ನೋಟಿಸ್ ನೀಡಿದ್ದರಿಂದ ಹುಸೇನ್ ನ್ಯಾಯಾಲಯದ ಮೊರೆ ಹೋಗಿದ್ದಾನೆ.