ಪಾಕಿಸ್ತಾನದ ಧ್ವಜ ತೆಗೆದ ಅಫ್ಘಾನರು!
ಫ್ರಾಂಕ್‌ಫರ್ಟ್ (ಜರ್ಮನಿ) – ಪಾಕಿಸ್ತಾನದ ವಾಣಿಜ್ಯ ರಾಯಭಾರಿ ಕಚೇರಿ ಮೇಲೆ ಅಫ್ಘಾನಿಸ್ತಾನದ ನಾಗರಿಕರು ದಾಳಿ ನಡೆಸಿದ ಘಟನೆ ಜುಲೈ 20 ರಂದು ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಆಗಿದೆ. ಅಫ್ಘಾನಿಸ್ತಾನದ ನಾಗರಿಕರು ರಾಯಭಾರಿ ಕಚೇರಿಗೆ ನುಗ್ಗಿ ಧ್ವಂಸ ಮಾಡಿದ್ದಲ್ಲದೆ, ಪಾಕಿಸ್ತಾನದ ಧ್ವಜವನ್ನು ತೆಗೆದು ಹಾಕಿದರು. ಈ ದಾಳಿಯ ವೇಳೆ ಅಲ್ಲಿನ ಭದ್ರತಾ ಸಿಬ್ಬಂದಿಯೊಂದಿಗೆ ಅಫ್ಘಾನರ ಮಾತಿನ ಚಕಮಕಿ ನಡೆದಿದೆ. ದಾಳಿಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲವಾದರೂ, ಪಾಕಿಸ್ತಾನವು ಆಫ್ಘನ್ ನಿರಾಶ್ರಿತರನ್ನು ಪುನಃ ಅಫ್ಘಾನಿಸ್ತಾನಕ್ಕೆ ಕಳುಹಿಸಿರುವುದರಿಂದ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಈ ಪ್ರಕರಣದಲ್ಲಿ ಜರ್ಮನಿ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ. ದಾಳಿಯ ನಂತರ ಪಾಕಿಸ್ತಾನವು ಕರಾಚಿಯಲ್ಲಿರುವ ಜರ್ಮನ್ ವಾಣಿಜ್ಯ ರಾಯಭಾರಿ ಕಛೇರಿಯ ಭದ್ರತೆಯನ್ನು ಹೆಚ್ಚಿಸಿದೆ. ಭದ್ರತಾ ಕಾರಣಗಳಿಗಾಗಿ ಸದ್ಯ ರಾಯಭಾರಿ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.