ಅನ್ನದಾತನಿಗೆ ಅವಮಾನ ಮಾಡಿದ ಪ್ರಕರಣ; ಬೆಂಗಳೂರಿನ ‘ಜಿಟಿ ವರ್ಲ್ಡ್ ಮಾಲ್’ ಅನ್ನು 7 ದಿನಗಳ ಕಾಲ ಮುಚ್ಚುವ ಶಿಕ್ಷೆ !

ಮಾಲ್ ನಲ್ಲಿ ಪಂಚೆ ಉಟ್ಟ ರೈತನಿಗೆ ಪ್ರವೇಶ ನಿರಾಕರಿಸಿದ ಪ್ರಕರಣ

ಬೆಂಗಳೂರು – ಪಂಚೆ ಮತ್ತು ನೆಹರು ಶರ್ಟ್ ಧರಿಸಿದ್ದ ರೈತನಿಗೆ ಪ್ರವೇಶ ನಿರಾಕರಿಸಿದ ಬೆಂಗಳೂರಿನ ‘ಜಿಟಿ ವರ್ಲ್ಡ್ ಮಾಲ್’ ವಿರುದ್ಧ ಸರಕಾರ ಕ್ರಮ ಕೈಗೊಂಡಿದೆ. ಮಾಲ್ ಅನ್ನು 7 ದಿನಗಳ ಕಾಲ ಮುಚ್ಚುವಂತೆ ಶಿಕ್ಷೆ ನೀಡಲಾಗಿದೆ. ಹಾವೇರಿಯ ರೈತ ಫಕೀರಪ್ಪನು ಪತ್ನಿ ಸಮೇತ ಬೆಂಗಳೂರಿನಲ್ಲಿ ಓದುತ್ತಿರುವ ಮಗನನ್ನು ಭೇಟಿಯಾಗಲು ಬಂದಿದ್ದರು. ಮೂವರು ಮಾಲ್‌ನಲ್ಲಿರುವ ‘ಮಲ್ಟಿಪ್ಲೆಕ್ಸ್‌ನಲ್ಲಿ’ ಚಲನಚಿತ್ರ ವೀಕ್ಷಿಸಲು ಹೋದಾಗ, ಮಾಲ್‌ನ ಭದ್ರತಾ ಸಿಬ್ಬಂದಿ ಪ್ರವೇಶ ದ್ವಾರದಲ್ಲಿ ಅವರನ್ನು ತಡೆದು ಮಾಲ್‌ನ ನಿಯಮಗಳನ್ನು ಹೇಳತೊಡಗಿದ. ಭದ್ರತಾ ಸಿಬ್ಬಂದಿ ಅವರಿಗೆ ‘ಪ್ಯಾಂಟ್ ಹಾಕಿಕೊಂಡು ಬಂದರೆ ಮಾತ್ರ ಒಳಗೆ ಬಿಡುತ್ತೇನೆ’ ಎಂದರು. ತಂದೆ ಮತ್ತು ಮಗ ಇಬ್ಬರೂ ಭದ್ರತಾ ಸಿಬ್ಬಂದಿಗೆ ಪದೇ ಪದೇ ಮನವಿ ಮಾಡಿದರೂ ಅವರು ಕೇಳಲಿಲ್ಲ.

ಈ ಘಟನೆಯನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ವೀಡಿಯೊವನ್ನು ಗಮನಿಸಿದ ಸರಕಾರವು ಭಾರತೀಯ ದಂಡ ಸಂಹಿತೆ ಕಲಂ 126 (2) (ತಪ್ಪಾದ ಪದ್ದತಿಯಿಂದ ಒಬ್ಬರನ್ನು ನಿರ್ಬಂಧಿಸುವುದು) ಅಡಿಯಲ್ಲಿ ಮಾಲ್ ನ ಮಾಲೀಕರು ಮತ್ತು ಭದ್ರತಾ ಸಿಬ್ಬಂದಿಯ ವಿರುದ್ಧ ಅಪರಾಧವನ್ನು ದಾಖಲಿಸಿ ಮಾಲ್ ಅನ್ನು 7 ದಿನಗಳವರೆಗೆ ಮುಚ್ಚಲು ಆದೇಶ ನೀಡಿತು. ಜುಲೈ 16 ರಂದು ಈ ಘಟನೆ ನಡೆದಿದ್ದು, ಜುಲೈ 18 ರಂದು ಮಾಲ್ ವಿರುದ್ಧ ಕ್ರಮ ಕೈಗೊಳ್ಳಲಾಯಿತು.