ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆಯವರ ಮಾಹಿತಿ
ಬೀದರ – ರಾಜ್ಯದ ಮದರಸಾಗಳಲ್ಲಿ ವಾರದಲ್ಲಿ 2 ದಿನ ಕನ್ನಡ ಕಲಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾಹಿತಿ ನೀಡಿದ್ದಾರೆ. ಆರಂಭದಲ್ಲಿ ಈ ಯೋಜನೆಯನ್ನು ಬೆಂಗಳೂರು, ವಿಜಯಪುರ, ರಾಯಚೂರು ಮತ್ತು ಕಲಬುರಗಿಯ ಕೆಲವು ಆಯ್ದ ಮದರಸಾಗಳಲ್ಲಿ ಪ್ರಾರಂಭಿಸಲಾಗುವುದು. ಭಾಷೆಯಲ್ಲಿನ ಬಿರುಕನ್ನು ನಿವಾರಿಸುವುದು ಅದರ ಮುಖ್ಯ ಉದ್ದೇಶವಾಗಿದೆ. ಅಲ್ಪಸಂಖ್ಯಾತ ಮುಸ್ಲಿಮರಿಂದಲೂ ಈ ವಿಷಯದ ಬೇಡಿಕೆ ಇದ್ದು, ಮದರಸಾ ನಡೆಸುವ ಕೆಲವು ವಿದ್ವಾಂಸರೊಂದಿಗೆ ಈ ವಿಷಯದ ಕುರಿತು ಚರ್ಚಿಸಲಾಗಿದೆಯೆಂದು ಅವರು ಹೇಳಿದರು.
ಮಹಾರಾಷ್ಟ್ರ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಪಡೆದಿರುವವರಿಗೆ ಶಿಕ್ಷಣದಲ್ಲಿ ಶೇ. 5 ರಷ್ಟು ಮೀಸಲಾತಿಯನ್ನು ಇರಿಸಲಾಗಿದೆ. ಇದೇ ನಿಲುವನ್ನು ರಾಜ್ಯದಲ್ಲಿಯೂ ಜಾರಿಯಾಗಬೇಕು. ಖಾಸಗಿ ವಲಯದ ಉದ್ಯೋಗಗಳಲ್ಲಿ ಶೇ. 80 ರಷ್ಟು ಕನ್ನಡಿಗರಿಗೆ ಮೀಸಲಿಡಬೇಕು. ಈ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು.
ಆ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್, ಆಡಳಿತಾಧಿಕಾರಿ ಶಿವುಕುಮಾರ ಶಿಲವಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂದೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.