J&K : ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಇವರ ಅಧಿಕಾರದಲ್ಲಿ ಹೆಚ್ಚಳ !

  • ಕೇಂದ್ರ ಸರಕಾರದ ಮಹತ್ವ ನಿರ್ಧಾರ

  • ಈಗ ಸರಕಾರಕ್ಕಿಂತ ರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರ ಇರಲಿದೆ !

ರಾಜ್ಯಪಾಲ ಮನೋಜ ಸಿನ್ಹಾ

ಜಮ್ಮು – ಕೇಂದ್ರ ಸರಕಾರವು ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಇವರ ಅಧಿಕಾರವನ್ನು ಹೆಚ್ಚಿಸುತ್ತಾ ಈಗ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ನಂತೆ ಆಡಳಿತಾತ್ಮಕ ಅಧಿಕಾರವನ್ನು ನೀಡಿದೆ. ಈಗ ಜಮ್ಮು- ಕಾಶ್ಮೀರದಲ್ಲಿಯೂ ರಾಜ್ಯ ಸರಕಾರವು ಲೆಫ್ಟಿನೆಂಟ್ ಗವರ್ನರ್ ಅವರ ಅನುಮತಿ ಇಲ್ಲದೇ ಪೊಲೀಸ್ ಮತ್ತು ಅಧಿಕಾರಿಗಳನ್ನು ವರ್ಗಾವಣೆ ಅಥವಾ ನೇಮಕ ಮಾಡುವಂತಿಲ್ಲ. ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರ ನೀಡುವುದಕ್ಕಾಗಿ ಗೃಹ ಸಚಿವಾಲಯವು ಜಮ್ಮು-ಕಾಶ್ಮೀರ ಮರುಸಂಘಟನೆ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿದೆ. ಗೃಹ ಸಚಿವಾಲಯವು ‘ಜಮ್ಮು-ಕಾಶ್ಮೀರ ಮರುಸಂಘಟನೆ ಕಾಯಿದೆ, 2019’ ರ ಕಲಂ 55 ರ ಅಡಿಯಲ್ಲಿ ತಿದ್ದುಪಡಿ ಮಾಡಿದ ನಿಯಮಗಳನ್ನು ಸೂಚಿಸಿದೆ. ಇದರಲ್ಲಿ ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರವನ್ನು ನೀಡುವ ಹೊಸ ಸೂತ್ರಗಳನ್ನು ಸೇರಿಸಲಾಗಿದೆ.

ಜಮ್ಮು-ಕಾಶ್ಮೀರದ ಮರುಸಂಘಟನೆಯು ಆದ ನಂತರ ಅಲ್ಲಿ ಚುನಾವಣೆ ನಡೆದಿಲ್ಲ. ಭವಿಷ್ಯದಲ್ಲಿ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆದು ಸರಕಾರ ರಚನೆಯಾದಾಗ ಚುನಾಯಿತ ಸರಕಾರಕ್ಕಿಂತ ಲೆಫ್ಟಿನೆಂಟ್ ಗವರ್ನರ್ ಗೆ ಹೆಚ್ಚಿನ ಅಧಿಕಾರ ಇರುತ್ತದೆ. ಈ ಅಧಿಕಾರ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅಧಿಕಾರದಂತೆಯೇ ಇರುತ್ತದೆ. ಈ ನಿಯಮಗಳನ್ನು ‘ಜಮ್ಮು- ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಸರಕಾರ (ಎರಡನೇ ತಿದ್ದುಪಡಿ) ನಿಯಮಗಳು, 2024’ ಎಂದು ಕರೆಯಬಹುದು ಎಂದು ಗೃಹ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ಹೇಳಲಾಗಿದೆ. ಈ ತಿದ್ದುಪಡಿಯು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ, ಅಂದರೆ ಜುಲೈ 12, 2024 ರಿಂದ ಜಾರಿಯಾಲಾಗಿದೆ.