ಮಾದಕ ಪದಾರ್ಥಗಳ ಚುಚ್ಚುಮದ್ದಿನ ಪರಿಣಾಮ !
ಅಗರ್ತಲಾ – ತ್ರಿಪುರಾದಲ್ಲಿ `ಎಚ್‌ಐವಿ-ಏಡ್ಸ್’ ರೋಗಿಗಳ ಸಂಖ್ಯೆಯಲ್ಲಿ ನಿರಂತರ ವೃದ್ಧಿಯಾಗುತ್ತಿದೆ. ರಾಜ್ಯದಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಚ್ ಐವಿ ಸೋಂಕಿಗೆ ಗುರಿಯಾಗಿರುವ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳಲ್ಲಿ ಎಚ್ಐವಿ ಹರಡಲು ಮಾದಕ ಪದಾರ್ಥಗಳ ಚುಚ್ಚುಮದ್ದಿನ ಬಳಕೆಯೇ ಮುಖ್ಯ ಕಾರಣವಾಗಿದೆ.
ತ್ರಿಪುರಾದ ಏಡ್ಸ್ ನಿಯಂತ್ರಣ ಸೊಸೈಟಿಯ ಅಧಿಕಾರಿಗಳು ಈ ಬಗ್ಗೆ ಮಾತನಾಡಿ, ಇತ್ತೀಚೆಗೆ 828 ವಿದ್ಯಾರ್ಥಿಗಳಿಗೆ ಎಚ್‌ಐವಿ ಸೋಂಕು ತಗಲಿದೆ ಹಾಗೂ 47 ವಿದ್ಯಾರ್ಥಿಗಳು ಏಡ್ಸ್‌ನಿಂದ ಸಾವನ್ನಪ್ಪಿದ್ದಾರೆ. ತ್ರಿಪುರಾದಲ್ಲಿ ಪ್ರತಿದಿನ 5 ರಿಂದ 7 ಹೊಸ ಎಚ್‌ಐವಿ ರೋಗಿಗಳು ಪತ್ತೆಯಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಅಸುರಕ್ಷಿತ ಲೈಂಗಿಕ ಸಂಬಂಧದಿಂದ ಎಚ್ಐವಿ ಸೋಂಕು ಹರಡುವ ದೊಡ್ಡ ಅಪಾಯವಿರುತ್ತದೆ. ಹಾಗೆಯೇ ಮಾದಕ ಪದಾರ್ಥಗಳ ಚುಚ್ಚುಮದ್ದು ಮೂಲಕ ಎಚ್ಐವಿ ಹರಡುತ್ತದೆ. ಎಚ್ಐವಿ ಸೋಂಕಿನಿಂದ ಬಳಲುತ್ತಿದ್ದ ವಿದ್ಯಾರ್ಥಿಗಳು ಬಳಸಿದ ಮಾದಕ ಪದಾರ್ಥಗಳ ಚುಚ್ಚುಮದ್ದಿನ ಸೂಜಿಯನ್ನು ಮತ್ತೊಬ್ಬ ವಿದ್ಯಾರ್ಥಿ ಬಳಸಿದರೆ ಅವನಿಗೂ ಈ ಸೋಂಕು ತಗಲುತ್ತದೆ. ತ್ರಿಪುರಾದ 220 ಶಾಲೆಗಳು ಮತ್ತು 24 ಕಾಲೇಜುಗಳಲ್ಲಿ ಎಚ್‌ಐವಿ ಪ್ರಕರಣಗಳು ವರದಿಯಾಗಿವೆ. ಏಡ್ಸ್ ನಿಯಂತ್ರಣ ಸೊಸೈಟಿಯ ಸಹ ನಿರ್ದೇಶಕ ಸುಭ್ರಜಿತ್ ಭಟ್ಟಾಚಾರ್ಯ ಅವರು ಮಾತನಾಡಿ, ಎಚ್‌ಐವಿ ಪೀಡಿತರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಶ್ರೀಮಂತ ಕುಟುಂಬದವರಾಗಿದ್ದಾರೆ. ಪೋಷಕರಿಗೆ ತಮ್ಮ ಮಕ್ಕಳು ಮಾದಕ ಪದಾರ್ಥ ಸೇವಿಸುತ್ತಿದ್ದಾರೆ ಎಂದು ತಿಳಿಯುವುದರೊಳಗೆ ಸಮಯ ಕೈ ಮೀರಿ ಹೋಗಿರುತ್ತದೆ ಎಂದರು.
`ನ್ಯಾಶನಲ್ ಏಡ್ಸ್ ಕಂಟ್ರೋಲ್ ಆರ್ಗನೈಸೇಷನ್’ ವರದಿಯ ಪ್ರಕಾರ ಚುಚ್ಚುಮದ್ದಿನ ಔಷಧಿಯಿಂದ ಮಿಜೋರಾಂನಲ್ಲಿ ಅತಿ ಹೆಚ್ಚು ಎಚ್ಐವಿ ಸೋಂಕು ತಗುಲಿದೆ. ಮಿಜೋರಾಂನಲ್ಲಿ ಎಚ್ಐವಿ ಸೋಂಕಿತರಲ್ಲಿ ಅಂದಾಜು ಶೇ. 20 ರಷ್ಟು ಜನರು ಇಂಜೆಕ್ಷನ್ ಔಷಧಿಗಳನ್ನು ಬಳಸಿದ್ದಾರೆ. ಇದರಲ್ಲಿ ದೆಹಲಿ ಎರಡನೇ ಸ್ಥಾನದಲ್ಲಿದೆ, ಅಲ್ಲಿ ಇಂತಹ ಸೋಂಕಿತರ ಪ್ರಮಾಣ ಶೇಕಡಾ 16 ಕ್ಕಿಂತ ಹೆಚ್ಚಿದೆ.
ಸಂಪಾದಕೀಯ ನಿಲುವುವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಸಾಧನೆಯನ್ನು ಕಲಿಸಿದ್ದರೆ, ಅವರು ವ್ಯಸನದಿಂದ ಸಿಗುವ ಕ್ಷಣಿಕ ಆನಂದಕ್ಕಿಂತ ನಿರಂತರ ಸಿಗುವ ಆನಂದವನ್ನು ಅನುಭವಿಸುತ್ತಿದ್ದರು ಮತ್ತು ಅವರು ಜೀವ ತೆಗೆಯುವ ವ್ಯಸನದಿಂದ ದೂರವಿರುತ್ತಿದ್ದರು. |