ಕರಗಿದ ಅಮರನಾಥ ಗುಹೆಯಲ್ಲಿನ ಶಿವಲಿಂಗ !

ಆಗಸ್ಟ್ 19 ರವರೆಗೆ ಮುಂದುವರಿಯಲಿರುವ ಯಾತ್ರೆ!

ಶ್ರೀನಗರ (ಜಮ್ಮು-ಕಾಶ್ಮೀರ) – ಈ ವರ್ಷ ದೇಶದಾದ್ಯಂತ ಹಲವು ಸ್ಥಳಗಳಲ್ಲಿ ದಾಖಲೆಯ ಉಷ್ಣತೆ ಇತ್ತು. ಉಷ್ಣಾಘಾತದ ಪರಿಣಾಮ ಅಮರನಾಥ ಯಾತ್ರೆ ಮೇಲೆ ಕಂಡುಬಂದಿದೆ. ಅಮರನಾಥ ಯಾತ್ರೆಯು ಜೂನ್ 30 ರಂದು ಪ್ರಾರಂಭವಾಗಿತ್ತು, ಮತ್ತು ಕೇವಲ 7 ದಿನಗಳಲ್ಲಿಯೇ ಅಮರನಾಥ ಗುಹೆಯಲ್ಲಿನ ಶಿವಲಿಂಗವು ಕರಗಿದೆ. ‘ಅಮರನಾಥ ಶ್ರೈನ್ ಬೋರ್ಡಾ’ ತನ್ನ ಯೂಟ್ಯೂಬ್‌ ಚಾನೆಲ್ ನಲ್ಲಿ ಪ್ರಸಾರ ಮಾಡಿರುವ ವೀಡಿಯೊದಲ್ಲಿ ಶಿವಲಿಂಗ ಕರಗಿರುವುದು ಸ್ಪಷ್ಟವಾಗಿ ಕಂಡು ಬಂದಿದೆ.

ಅಮರನಾಥ ಯಾತ್ರೆ ಆರಂಭವಾದ ಕೆಲವೇ ದಿನಗಳಲ್ಲಿ ಶಿವಲಿಂಗ ಕರಗಿದ ಘಟನೆಗಳು ಈ ಹಿಂದೆಯೂ ನಡೆದಿದೆ. 2008ರಲ್ಲಿ, ಯಾತ್ರೆ ಪ್ರಾರಂಭವಾದ 10 ದಿನಗಳಲ್ಲಿ ಶಿವಲಿಂಗವು ಕರಗಿತ್ತು. 2016ರಲ್ಲಿ, 13 ದಿನಗಳಲ್ಲಿ ಕರಗಿತ್ತು. ಕಳೆದ ವರ್ಷ ಕೇವಲ 14 ದಿನಗಳಲ್ಲಿಯೇ ಶಿವಲಿಂಗ ಕರಗಿತ್ತು. ಈಗ ಅಮರನಾಥಕ್ಕೆ ಬರುವ ಭಕ್ತರು ಕೇವಲ ಪವಿತ್ರ ಗುಹೆಯ ದರ್ಶನವನ್ನು ಮಾತ್ರ ಮಾಡಬಹುದಾಗಿದೆ. ಈ ಯಾತ್ರೆಯು ಆಗಸ್ಟ್ 19ರವರೆಗೆ ಮುಂದುವರೆಯಲಿದೆ.