ಬಿಹಾರ: ಮತ್ತೊಂದು ಸೇತುವೆಯ ಕುಸಿತ

15 ದಿನಗಳಲ್ಲಿ ಹತ್ತನೇ ಇಂತಹ ಘಟನೆ

ಸಾರಣ (ಬಿಹಾರ) – ಜಲೈ 4 ರಂದು ಬೆಳಿಗ್ಗೆ ಗಂಡಕಿ ನದಿಯ ಮೇಲಿನ ಸೇತುವೆಯೊಂದು ಕುಸಿದಿದೆ. ಈ ಸೇತುವೆಯು 15 ವರ್ಷಗಳ ಹಿಂದೆ ಸ್ಥಳೀಯರು ತಮ್ಮ ವೈಯಕ್ತಿಕ ನಿಧಿಯಿಂದ ನಿರ್ಮಿಸಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ. ಸೇತುವೆಯ ಕುಸಿತದ ನಿಜವಾದ ಕಾರಣ ಇದುವರೆಗೂ ತಿಳಿದುಬಂದಿಲ್ಲ. ಕಳೆದ 15 ದಿನಗಳಲ್ಲಿ ರಾಜ್ಯದಲ್ಲಿ ಸೇತುವೆ ಕುಸಿತದ ಇದು 10ನೇ ಘಟನೆಯಾಗಿದೆ. ಜುಲೈ 3 ರಂದು ಸಾರಣ ಜಿಲ್ಲೆಯ ಜನತಾ ಬಾಜಾರ ಪ್ರದೇಶದಲ್ಲಿ ಮತ್ತು ಲಹಲಾದಪುರ ಪ್ರದೇಶದಲ್ಲಿ 2 ಚಿಕ್ಕ ಸೇತುವೆಗಳು ಕುಸಿದಿದ್ದವು. ಮೇಲಿಂದ ಮೇಲೆ ಸೇತುವೆ ಕುಸಿಯುತ್ತಿರುವ ಘಟನೆಗಳ ಹಿಂದಿನ ಕಾರಣಗಳನ್ನು ಕಂಡು ಹಿಡಿಯಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಮನ್ ಸಮೀರ್ ಹೇಳಿದರು.

ಬಿಹಾರ ಸರಕಾರದ ಸೇತುವೆ ನಿರ್ಮಾಣದ ತನಿಖೆ (ಸ್ಟ್ರಕ್ಚರಲ್ ಆಡಿಟ್ )ನಡೆಸಲು ನಿರ್ದೇಶನಗಳನ್ನು ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ. ನ್ಯಾಯವಾದಿ ಬ್ರಜೇಶ್ ಸಿಂಗ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ, ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ಸ್ಥಾಪಿಸುವುದರೊಂದಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ನಿಯಮಗಳ ಪ್ರಕಾರ ಸೇತುವೆಯ ಉಸ್ತುವಾರಿಯನ್ನು ನೇಮಿಸುವಂತೆಯೂ ಮನವಿ ಮಾಡಲಾಗಿದೆ.

ಸಂಪಾದಕೀಯ ನಿಲುವು

ಬ್ರಿಟಿಷರು ನಿರ್ಮಿಸಿದ ಸೇತುವೆಗಳು 100 ವರ್ಷಗಳ ನಂತರವೂ ಒಳ್ಳೆಯ ಸುಸ್ಥಿತಿಯಲ್ಲಿವೆ, ಆದರೆ ಸ್ವಾತಂತ್ರ್ಯದ ನಂತರ ನಿರ್ಮಿಸಲಾದ ಸೇತುವೆಗಳು 10 ವರ್ಷವೂ ಬಾಳಿಕೆ ಬರುವುದಿಲ್ಲ. ಇದು ಭಾರತೀಯರಿಗೆ ಮತ್ತು ಎಲ್ಲಾ ಪಕ್ಷದ ನಾಯಕರಿಗೆ ನಾಚಿಕೆಗೇಡಿನ ವಿಷಯ !