Complaint Filed On Women : ಸ್ವರ್ಣ ಮಂದಿರದ ಆವರಣದಲ್ಲಿ ಯೋಗ ಮಾಡಿದ ಹಿಂದೂ ಮಹಿಳೆ ವಿರುದ್ಧ ಪೊಲೀಸರಿಗೆ ದೂರು

ಮಹಿಳೆಯಿಂದ ಕ್ಷಮಾಯಾಚನೆ

ಅಮೃತಸರ (ಪಂಜಾಬ್) – ಪ್ರಸಿದ್ಧ ಸ್ವರ್ಣ ಮಂದಿರದ (ಗೋಲ್ಡನ್ ಟೆಂಪಲ್) ಆವರಣದಲ್ಲಿ ಯೋಗಾಭ್ಯಾಸ ಮಾಡಿ ಅದರ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ ಅರ್ಚನಾ ಮಕ್ವಾನಾ ಎಂಬ ಮಹಿಳೆಯ ವಿರುದ್ಧ ಶಿರೋಮಣಿ ಗುರುದ್ವಾರ ಪ್ರಭಂದಕ ಸಮಿತಿಯು ದೂರು ದಾಖಲಿಸಿದೆ. ಮಕ್ವಾನಾ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಮಕ್ವಾನಾ ಕ್ಷಮೆಯಾಚಿಸಿದ್ದು, ‘ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ನನಗಿರಲಿಲ್ಲ’, ಎಂದು ಹೇಳಿದ್ದಾರೆ. ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಅವರು ಸುವರ್ಣ ಮಂದಿರದ ಪ್ರದಕ್ಷಿಣಾ ಪಥದಲ್ಲಿ ಯೋಗ ಪ್ರದರ್ಶಿಸಿದ್ದರು. ಈ ಪ್ರಕರಣದಲ್ಲಿ ಮಂದಿರ ಸಮಿತಿಯು ಮೂವರು ನೌಕರರನ್ನು ಅಮಾನತುಗೊಳಿಸಿದೆ.

ಮಕ್ವಾನಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ದೂರು ಕಳುಹಿಸಲಾಗಿದೆ ಎಂದು ಸಮಿತಿ ಮುಖ್ಯಸ್ಥ ಹರ್ಜಿಂದರ್ ಸಿಂಗ್ ಧಾಮಿ ತಿಳಿಸಿದ್ದಾರೆ. ಕೆಲವು ಜನರು ಈ ಪವಿತ್ರ ಸ್ಥಳದ ಪಾವಿತ್ರ್ಯತೆ ಮತ್ತು ಐತಿಹಾಸಿಕ ಮಹತ್ವವನ್ನು ಉದ್ದೇಶ ಪೂರ್ವಕವಾಗಿ ನಿರ್ಲಕ್ಷಿಸಿ ಆಕ್ಷೇಪಾರ್ಹ ಕೃತ್ಯಗಳನ್ನು ಮಾಡುತ್ತಾರೆ. ಈ ಕೃತ್ಯವು ಸಿಖ್ಖರ ಭಾವನೆಗಳಿಗೆ ಮತ್ತು ಗೌರವಕ್ಕೆ ಧಕ್ಕೆ ತಂದಿದೆ. ಆದ್ದರಿಂದ ಪೊಲೀಸರಿಗೆ ದೂರು ನೀಡಲಾಗಿದೆ ಎಂದವರು ಹೇಳಿದರು.

ಗುರುದ್ವಾರ ಸಾಹಿಬ್ ಆವರಣದಲ್ಲಿ ಯೋಗಾಭ್ಯಾಸ ಮಾಡುವುದರಿಂದ ಕೆಲವರಿಗೆ ಆಕ್ಷೇಪ ಇರಬಹುದು ಎಂದು ನನಗೆ ತಿಳಿದಿರಲಿಲ್ಲ ಎಂದು ಮಕ್ವಾನಾ ಕ್ಷಮೆಯಾಚಿಸುವಾಗ ಹೇಳಿದರು. ನಾನು ಯಾರನ್ನೂ ನೋಯಿಸುವ ಉದ್ದೇಶವನ್ನು ಹೊಂದಿರಲಿಲ್ಲ. ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಮತ್ತು ಭವಿಷ್ಯದಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಇರುವುದಾಗಿ ಭರವಸೆ ನೀಡುತ್ತೇನೆ. ದಯವಿಟ್ಟು ನನ್ನ ಕ್ಷಮೆಯನ್ನು ಸ್ವೀಕರಿಸಿ ಎಂದು ಹೇಳಿದರು.