ಬಂಗಾಳ: ಗಂಟೆಗೆ 135 ಕಿ.ಮೀ. ವೇಗವಾಗಿ ಅಪ್ಪಳಿಸಿದ ‘ರೆಮಲ್’ ಚಂಡಮಾರುತ !

ನೆಲಸಮಗೊಂಡ ಮರ, ಮನೆ ಮತ್ತು ವಿದ್ಯುತ್ ಕಂಬಗಳು

ಕೊಲ್ಕತ್ತಾ (ಬಂಗಾಳ) – ‘ರೆಮಲ್’ ಚಂಡಮಾರುತವು ಬಂಗಾಳದ ಸಮುದ್ರ ತೀರದ ಮೇಲೆ (ಕರಾವಳಿಯನ್ನು) ಅಪ್ಪಳಿಸಿದೆ. ಗಂಟೆಗೆ 135 ಕಿ.ಮೀ ಗಾಳಿ(ತೂಫಾನ್) ವೇಗವಾಗಿ ಬೀಸುತ್ತಿದ್ದು ಧಾರಾಕಾರ ಮಳೆ ಸುರಿದಿದೆ. ಚಂಡಮಾರುತದಿಂದ ಕರಾವಳಿ ಪ್ರದೇಶಗಳಿಗೆ ಹಾನಿಯಾಗಿದೆ. ಮರಗಳು ಬುಡಸಮೇತ ಧರೆಗುರುಳಿವೆ, ಮನೆಗಳು ಕುಸಿದಿವೆ, ವಿದ್ಯುತ್ ಕಂಬಗಳೂ ನೆಲಕ್ಕುರುಳಿವೆ. ಸುಂದರ್‌ಬನದ ಗೋಸಾಬಾ ಪ್ರದೇಶದಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಚಂಡಮಾರುತ ಅಪ್ಪಳಿಸುವ ಮೊದಲು ಬಂಗಾಳದ ಕರಾವಳಿ ಭಾಗದಲ್ಲಿ ವಾಸಿಸುವ ಅಂದಾಜು 1 ಲಕ್ಷದ 10,000 ಜನರನ್ನು ಸ್ಥಳಾಂತರಿಸಲಾಯಿತು. ಸ್ಥಳಾಂತರಗೊಂಡವರಲ್ಲಿ ಹೆಚ್ಚಿನ ಜನರು ದಕ್ಷಿಣ 24 ಪರಗಣಾ ಜಿಲ್ಲೆಯವರಾಗಿದ್ದಾರೆ. ರಾಜ್ಯ ವಿಪತ್ತು ನಿರ್ವಹಣೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಪ್ರತ್ಯೇಕ 16 ತಂಡಗಳನ್ನು ಕರಾವಳಿ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.

ರೆಮಲ್ ಚಂಡಮಾರುತದಿಂದಾಗಿ ಬಾಗಡೋಗರ, ಗೌಹಾಟಿ, ದಿಬ್ರುಗಢ, ಜೋರ್ಹಾಟ, ದಿಮಾಪುರ್, ಇಂಫಾಲ್, ಅಗರ್ತಲಾ, ರಾಂಚಿ ಮತ್ತು ದುರ್ಗಾಪುರದಿಂದ ಹೊರಡುವ ವಿಮಾನಗಳ ಹಾರಾಟಕ್ಕೆ ತೊಂದರೆಯಾಗಿದೆ ಎಂದು ಇಂಡಿಗೋ ಏರ್‌ಲೈನ್ಸ್ ತಿಳಿಸಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ಪ್ರಯಾಣಿಕರು ವಿಮಾನದ ಸಮಯವನ್ನು ಪರಿಶೀಲಿಸಬೇಕು ಎಂದು ಸೂಚಿಸಿದೆ.

ಎತ್ತರದ ಮತ್ತು ಶಿಥಿಲಗೊಂಡ ಕಟ್ಟಡಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಹೇಳಿದ್ದಾರೆ. ಚಂಡಮಾರುತದ ನಂತರದ ಪರಿಸ್ಥಿತಿಯನ್ನು ನಿಭಾಯಿಸಲು 15 ಸಾವಿರ ಜನರನ್ನು ನಿಯೋಜಿಸಲಾಗಿದೆ. ಬುಡ ಸಮೇತ ಬಿದ್ದ ಮರಗಳನ್ನು ತೆಗೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.