Madras HC allows Angapradakshinam : ಎಂಜಲು ಊಟದೆಲೆಗಳ ಮೇಲೆ ಅಂಗಪ್ರದಕ್ಷಿಣೆಗೆ ಅನುಮತಿ ನೀಡಿದ ಮದ್ರಾಸ್ ಉಚ್ಚ ನ್ಯಾಯಾಲಯ

2015ರಲ್ಲಿ ಉಚ್ಚ ನ್ಯಾಯಾಲಯ ನಿಷೇಧ ಹೇರಿತ್ತು!

ಚೆನ್ನೈ (ತಮಿಳುನಾಡು) – ಮದ್ರಾಸ್ ಉಚ್ಚ ನ್ಯಾಯಾಲಯವು ಎಂಜಲು ಊಟದೆಲೆಗಳ ಮೇಲೆ ಅಂಗಪ್ರದಕ್ಷಿಣೆ ಹಾಕಲು ಅನುಮತಿ ನೀಡಿದೆ. 2015ರಲ್ಲಿ ಮದ್ರಾಸ್‌ ಉಚ್ಚ ನ್ಯಾಯಾಲಯವು ಈ ಪದ್ಧತಿಯ ಮೇಲೆ ನಿಷೇಧ ಹೇರಿತ್ತು.

ಕೋರ್ಟ್ ಹೇಳಿದ್ದು,

1. ಈ ಪದ್ಧತಿಯ ಆಧ್ಯಾತ್ಮಿಕ ಪರಿಣಾಮಗಳ ಸಂದರ್ಭದಲ್ಲಿ ಅರ್ಜಿದಾರರು ವ್ಯಕ್ತಪಡಿಸಿದ ನಂಬಿಕೆಯನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಆತಿಥೇಯರು ಬಾಳೆ ಎಲೆಯಲ್ಲಿ ಊಟ ಮಾಡಿದ ಬಳಿಕ ಆ ಎಲೆಯ ಮೇಲೆ ಅಂಗ ಪ್ರದಕ್ಷಿಣೆ ಮಾಡುವುದು ಭಕ್ತನ ಉನ್ನತ ಧಾರ್ಮಿಕ ಆರಾಧನೆಯಾಗಿದೆ. ಈ ಹಕ್ಕನ್ನು ಭಾರತೀಯ ಸಂವಿಧಾನದ ಭಾಗ 3 ರ ಮೂಲಕ ರಕ್ಷಿಸಲಾಗಿದೆ. ಯಾವುದೇ ವ್ಯಕ್ತಿಗೆ ಅಂಗಪ್ರದಕ್ಷಿಣೆ ಮಾಡಲು ಸಂಪೂರ್ಣ ಹಕ್ಕಿದೆ. ಸಂವಿಧಾನದ ಕಲಂ 14, 19 (1) (ಎ), 19 (1) (ಬಿ), 21 ಮತ್ತು 25 (1) ರ ಪ್ರಕಾರ, ಅವರ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

2. ವ್ಯಕ್ತಿಯ ಜೀವನಶೈಲಿಯನ್ನು ನಿಯಂತ್ರಿಸುವ ವ್ಯಕ್ತಿಯ ವೈಯಕ್ತಿಕ ಆಯ್ಕೆಗಳು ಗೌಪ್ಯತೆಗೆ ಅಂತರ್ಗತವಾಗಿರುತ್ತವೆ ಮತ್ತು ಕೇವಲ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿರುವುದರಿಂದ ಗೌಪ್ಯತೆಯು ಕಳೆದುಹೋಗುವುದಿಲ್ಲ ಅಥವಾ ಉಲ್ಲಂಘಿಸುವುದಿಲ್ಲ. ಸಂವಿಧಾನದ ಪರಿಚ್ಛೇದ 19 (1) (ಇ) ಪ್ರಕಾರ, ದೇಶದಾದ್ಯಂತ ಮುಕ್ತವಾಗಿ ಸಂಚರಿಸುವ ಅಧಿಕಾರ ಕೇವಲ ವಾಹನ ಚಲಾಯಿಸುವುದು ಅಥವಾ ವಾಹನಗಳ ಸಾಗಣೆಗೆ ಮಾತ್ರ ಸೀಮಿತವಾಗಿಲ್ಲ, ಅಂಗಪ್ರದಕ್ಷಿಣೆಯೂ ಅದರಲ್ಲಿ ಸೇರಿದೆ.

3. ಅರ್ಜಿದಾರರು ಅಂಗಪ್ರದಕ್ಷಿಣೆ ಅನುಮತಿಗಾಗಿ ಪ್ರಾರ್ಥನೆ ಮಾಡುವುದು ಅನಗತ್ಯವಾಗಿದೆ; ಏಕೆಂದರೆ ಸಾಂಪ್ರದಾಯಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿ ಪಡೆಯುವ ಅಗತ್ಯವಿಲ್ಲ. ಅರ್ಜಿದಾರರು ಅಂಗಪ್ರದಕ್ಷಿಣೆ ಮಾಡಬಹುದು ಮತ್ತು ಅಧಿಕಾರಿಗಳು ಅದರಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಅರ್ಜಿದಾರರ ಮೂಲಭೂತ ಹಕ್ಕನ್ನು ಚಲಾಯಿಸಲು ಸಹಾಯ ಮಾಡುವುದು ಮತ್ತು ಅಡಚಣೆಗಳನ್ನು ದೂರಗೊಳಿಸಲು ಸಹಾಯ ಮಾಡುವುದು ಪೊಲೀಸರ ಕರ್ತವ್ಯವಾಗಿದೆ.

4. ಈ ದೂರಿನಲ್ಲಿ ಬ್ರಾಹ್ಮಣರ ಎಂಜಲು ಬಾಳೆಎಲೆಯ ಮೇಲೆ ಇತರ ಸಮಾಜದ ಜನರು ಮಲಗುತ್ತಾರೆ ಈ ಕಲ್ಪನೆಯ ಮೇಲೆ ಸಂವಿಧಾನದ ಕಲಂ 17 ನ್ನು ತಪ್ಪಾಗಿ ಉಪಯೋಗಿಸಲಾಗಿದೆ. ಈ ಸಂಪ್ರದಾಯವು ಜಾತಿ ಸಾಮರಸ್ಯ ಮತ್ತು ಸಾಮಾಜಿಕ ಏಕತೆಯನ್ನು ನಿರ್ದೇಶಿಸುತ್ತದೆ.

ಅಂಗಪ್ರದಕ್ಷಿಣೆ ಎಂದರೆ ಏನು?

ಅಂಗಪ್ರದಕ್ಷಿಣೆ ಎಂದರೆ ಮಲಗಿಕೊಂಡು ಹಾಕುವ ಪ್ರದಕ್ಷಿಣೆ. ತಮಿಳುನಾಡಿನ ಕೆಲವು ದೇವಸ್ಥಾನಗಳಲ್ಲಿ ಬ್ರಾಹ್ಮಣರಿಗೆ ಬಾಳೆ ಎಲೆಗಳ ಮೇಲೆ ಊಟ ನೀಡಿದ ಬಳಿಕ ವ್ರತವನ್ನು ಆಚರಿಸುವ ವ್ಯಕ್ತಿಯು ಅವರ ಈ ಎಂಜಲು ಎಲೆಗಳ ಮೇಲಿನಿಂದ ಅಂಗಪ್ರದಕ್ಷಿಣೆ ಮಾಡುತ್ತಾರೆ.

ಏನಿದು ಪ್ರಕರಣ?

2015ರಲ್ಲಿ ಮದ್ರಾಸ್ ಉಚ್ಚನ್ಯಾಯಾಲಯದ ಓರ್ವ ನ್ಯಾಯಾಧೀಶರು ಯಾರಿಗೂ ಅಂಗಪ್ರದಕ್ಷಿಣೆ ಮಾಡಲು ಅವಕಾಶ ನೀಡದಂತೆ ನಿರ್ದೇಶನ ನೀಡಿದ್ದರು. ಧಾರ್ಮಿಕ ಆಚರಣೆಗಳು ಮತ್ತು ಪದ್ಧತಿಗಳಲ್ಲಿ ಹಸ್ತಕ್ಷೇಪ ಮಾಡಲು ನ್ಯಾಯಾಲಯದ ಇತಿಮಿತಿಗಳಿದ್ದರೂ, ಧರ್ಮದ ಹೆಸರಿನಡಿಯಲ್ಲಿ ಯಾವುದೇ ಆಚರಣೆಯನ್ನು ಅನುಸರಿಸುವ ಮೂಲಕ ಯಾವುದೇ ವ್ಯಕ್ತಿಯನ್ನು ಅವಮಾನಿಸುವುದನ್ನು ಅನುಮತಿಸಲಾಗುವುದಿಲ್ಲ.

ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರು ಅಂಗಪ್ರದಕ್ಷಿಣೆ ಮಾಡಲು ಬಯಸಿದ್ದು, ಅದಕ್ಕೆ ಅನುಮತಿ ಕೋರಿದ್ದರು. ಅವರು ತಮ್ಮ ಧರ್ಮವನ್ನು ಆಚರಿಸಲು ತಮ್ಮ ಮೂಲಭೂತ ಹಕ್ಕನ್ನು ಚಲಾಯಿಸಲು ಅವಕಾಶ ಮಾಡಿಕೊಡಬೇಕು ಎಂದು ವಾದವನ್ನು ಮಾಡಿರುವಾಗ, ಸರ್ಕಾರವು ನ್ಯಾಯಾಲಯದ ಆದೇಶದಂತೆ ಅನುಮತಿ ನೀಡಲು ಬರುವುದಿಲ್ಲವೆಂದು ಹೇಳಿತ್ತು.