ಪಾಟಲಿಪುತ್ರ (ಬಿಹಾರ) : ಶಾಲೆಯ ಚರಂಡಿಯಲ್ಲಿ ೪ ವರ್ಷದ ಹುಡುಗನ ಶವ ಪತ್ತೆ

  • ಆಕ್ರೋಶಿತಗೊಂಡ ಹುಡುಗನ ಸಂಬಂಧಿಕರಿಂದ ಶಾಲೆಗೆ ಬೆಂಕಿ

  • ಪೊಲೀಸರಿಂದ ಕೊಲೆಯ ದೂರು ದಾಖಲು

ಪಾಟಲಿಪುತ್ರ (ಬಿಹಾರ) – ಟಾಯನಿ ಟಾಟ್ ಅಕಾಡೆಮಿ ಎಂಬ ಶಾಲೆಯ ಚರಂಡಿಯಲ್ಲಿ ನಾಲ್ಕು ವರ್ಷದ ಹುಡುಗನ ಮೃತದೇಹ ಸಿಕ್ಕಿರುವುದರಿಂದ ಆಕ್ರೋಶಗೊಂಡಿರುವ ಹುಡುಗನ ಸಂಬಂಧಿಕರು ಸಂಪೂರ್ಣ ಶಾಲೆಗೆ ಬೆಂಕಿ ಹಚ್ಚಿರುವ ಘಟನೆ ಮೇ ೧೭ ರಂದು ಘಟಿಸಿದೆ. ಈ ಘಟನೆಯಿಂದ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸರು ಈ ಪ್ರಕರಣದಲ್ಲಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.

೧. ಹುಡುಗ ಶಾಲೆಯಿಂದ ಮನೆಗೆ ಹಿಂತಿರುಗದೆ ಇರುವುದರಿಂದ ಪಾಲಕರು ಆತಂಕಗೊಂಡಿದ್ದರು. ಪಾಲಕರು ಹುಡುಗನ ಬಗ್ಗೆ ಶಾಲೆಯಲ್ಲಿ ವಿಚಾರಿಸಿದಾಗ ಅವನು ಶಾಲೆ ಮುಗಿದ ನಂತರ ಮನೆಗೆ ಹೋಗಿದ್ದಾನೆಂದು ಹೇಳಿದರು. ಆ ಬಳಿಕ ಪೋಷಕರು ಮತ್ತು ಸಂಬಂಧಿಕರು ಹುಡುಗನ ಹುಡುಕಾಟ ಆರಂಭಿಸಿದಾಗ ಅವನ ಮೃತದೇಹ ಶಾಲೆಯ ಹತ್ತಿರದ ಚರಂಡಿಯಲ್ಲಿ ಪತ್ತೆಯಾಗಿದೆ. ಇದರಿಂದ ಸಂಬಂಧಿಕರು ಆಕ್ರೋಶಗೊಂಡು ಶಾಲೆಗೆ ಬೆಂಕಿ ಹಚ್ಚಿದರು ಹಾಗೂ ಶಾಲೆಯ ಎದುರಿನ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು. ಹಲವು ಗಂಟೆಗಳ ಕಾಲ ನಡೆದ ಈ ಪ್ರತಿಭಟನೆಯಿಂದ ಸಾರಿಗೆಗೆ ತೊಂದರೆ ಉಂಟಾಯಿತು. ಕೆಲ ಪ್ರತಿಭಟನಾಕಾರರು ರಸ್ತೆಯ ಮೇಲೆ ಟೈಯರ್ ಗಳನ್ನು ಕೂಡ ಸುಟ್ಟು ಹಾಕಿದರು.

೨. ಈ ಪ್ರಕರಣದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸ್ ಅಧಿಕಾರಿ ಚಂದ್ರಪ್ರಕಾಶ್ ಅವರು ಮಾತನಾಡಿ, ಶಾಲೆಯ ಸಿಸಿಟಿವಿಯಲ್ಲಿ ನಾವು ಈ ಹುಡುಗ ಶಾಲೆಗೆ ಹೋಗುವುದನ್ನು ನೋಡಿದ್ದೆವು ; ಆದರೆ ಹುಡುಗ ಶಾಲೆಯಿಂದ ಹೊರಗೆ ಬಂದಿರುವುದು ಕಾಣಲಿಲ್ಲ. ಈ ಪ್ರಕರಣದಲ್ಲಿ ಕೊಲೆಯ ದೂರು ದಾಖಲಿಸಲಾಗಿದೆ. ಮೃತ ದೇಹ ಮರೆ ಮಾಚುವುದು ಕಂಡು ಬಂದಿರುವುದರಿಂದ ಅದೇ ದಿಶೆಯಲ್ಲಿ ನಮ್ಮ ತನಿಖೆ ಮುಂದುವರೆದಿದೆ. ಶಾಲೆಯ ಪರಿಸರದಲ್ಲಿ ಮೃತದೇಹ ದೊರೆತಿರುವುದರಿಂದ ಶಾಲೆಗೆ ಸಂಬಂಧಿತರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು .