ಬೆಂಗಳೂರು – ‘ಇಸ್ರೋ’ವು ‘ಸೆಮಿ(ಅರೆ) ಕ್ರಯೋಜೆನಿಕ್ ಎಂಜಿನ್’ ನಿರ್ಮಾಣದಲ್ಲಿ ಒಂದು ಮಹತ್ವದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದೆ. ‘ಸೆಮಿ-ಕ್ರಯೋಜೆನಿಕ್ ಎಂಜಿನ್’ ಅನ್ನು ಪ್ರಾರಂಭಿಸಲು ‘ಪ್ರಿ-ಬರ್ನರ್’ ಅನ್ನು ಪ್ರಜ್ವಲನಗೊಳಿಸಬೇಕಾಗುತ್ತದೆ ಮತ್ತು ಇದೇ ಪರೀಕ್ಷೆ ಯಶಸ್ವಿಯಾಗಿದೆ. ಪರೀಕ್ಷೆಯನ್ನು ಮೇ 2 ರಂದು ನಡೆಸಲಾಯಿತು. ಈ ಎಂಜಿನ್ ಇಸ್ರೋದ ‘ಎಲ್.ವಿ.ಎಂ. 3’ ರಾಕೆಟ್‌ನ ಪೇಲೋಡ್ ಸಾಮರ್ಥ್ಯ (ಯಂತ್ರ ಅಥವಾ ಮಾನವನ ತೂಕವನ್ನು ಸಾಗಿಸುವ ಸಾಮರ್ಥ್ಯ) ಹೆಚ್ಚಿಸಲು ಸಹಾಯ ಮಾಡುತ್ತದೆ. ‘ಎಲ್.ವಿ.ಎಂ. 3’ ರಾಕೆಟ ಮೂಲಕವೇ ಭಾರತವು ಚಂದ್ರಯಾನ-3 ಮಿಷನ್ ಅನ್ನು ಉಡಾವಣೆ ಮಾಡಲಾಗಿತ್ತು. ‘ಚಂದ್ರಯಾನ-4’ ಮಿಷನ್‌ನಲ್ಲಿ ಇದೇ ರಾಕೆಟ್ ಅನ್ನು ಬಳಸಲಿದ್ದಾರೆ.
‘ಕ್ರಯೋಜೆನಿಕ್ ಎಂಜಿನ್’ ಎಂದರೆ ಏನು ?
ಒಂದು ರಾಕೆಟ್ ಅನ್ನು ಉಡಾವಣೆ ಮಾಡುವಾಗ ಎಷ್ಟು ಶಕ್ತಿ ಬೇಕಾಗುತ್ತದೆಯೋ, ಅದನ್ನು ಈ ಯಂತ್ರದ ಮೂಲಕ ಪೂರೈಸಲಾಗುತ್ತದೆ. ಈ ತಂತ್ರಜ್ಞಾನದಲ್ಲಿ ಉಪಯೋಗಿಸಲಾಗುವ ಇಂಧನವು ಅತ್ಯಂತ ಕಡಿಮೆ ತಾಪಮಾನದಲ್ಲಿ ಇರಿಸಲಾಗುತ್ತದೆ. ಈ ತಾಪಮಾನವು ಮೈನಸ್ 150 ಡಿಗ್ರಿ ಸೆಲ್ಸಿಯಸ್ ಗಿಂತಲೂ ಕಡಿಮೆಯಿರುತ್ತದೆ. ಭಾರತೀಯ ನಿರ್ಮಿತ ಸಾಧನೆಯ ಈ ಯಂತ್ರದ ಮೊದಲ ಯಶಸ್ವಿ ಪರೀಕ್ಷೆಯು 2003 ರಲ್ಲಿ ನಡೆಯಿತು; ಆದರೆ ಯಶಸ್ವಿ ಉಡಾವಣೆಗಾಗಿ ಸುಮಾರು ಮತ್ತೂ 11 ವರ್ಷಗಳ ಕಾಲ ಕಾಯಬೇಕಾಯಿತು. ಭಾರತೀಯ ನಿರ್ಮಿತ ಸಧ್ಯಕ್ಕೆ 2 ಕ್ರಯೋಜೆನಿಕ್ ಎಂಜಿನ್‌ಗಳಿವೆ – `ಸಿ.ಇ.-7.5’ ಮತ್ತು `ಸಿ.ಇ.-20’ ಈ ಯಂತ್ರಗಳಲ್ಲಿ, ದ್ರವರೂಪದ ಆಮ್ಲಜನಕ ಮತ್ತು ಹೈಡ್ರೋಜನ್ ಅನ್ನು ಇಂಧನವಾಗಿ ಬಳಸಲಾಗುತ್ತದೆ ಹಾಗೂ ಪ್ರಸ್ತುತ ಅಭಿವೃದ್ಧಿಪಡಿಸುತ್ತಿರುವ ಅರೆ-ಕ್ರಯೋಜೆನಿಕ್ ಎಂಜಿನಗಳಲ್ಲಿ, ದ್ರವ ಹೈಡ್ರೋಜನ್ ಬದಲಿಗೆ ಸಂಸ್ಕರಿಸಿದ ಸೀಮೆಎಣ್ಣೆಯನ್ನು ಬಳಸಲಾಗುತ್ತದೆ. ದ್ರವ ಆಮ್ಲಜನಕದ ಆವಿಯನ್ನು ‘ಆಕ್ಸಿಡೈಸರ್’ ಎಂದು ಮಾಡಲಾಗುತ್ತದೆ.