ಬಂಗಾಳ ರಾಜ್ಯಪಾಲರ ಮೇಲೆ ಮಹಿಳಾ ಗುತ್ತಿಗೆ ಉದ್ಯೋಗಿಯಿಂದ ಲೈಂಗಿಕ ಕಿರುಕುಳದ ಆರೋಪ

ಕೋಲಕಾತಾ (ಬಂಗಾಳ) – ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ ಅವರ ವಿರುದ್ಧ ರಾಜಭವನದ ಮಹಿಳಾ ಗುತ್ತಿಗೆ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಈ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ ಈ ಕುರಿತು ತನಿಖಾ ತಂಡ ರಚಿಸಲಾಗಿದ್ದು, ಈ ಪ್ರಕರಣದ ಸಾಕ್ಷಿದಾರರಿಂದ ಮಾಹಿತಿ ಪಡೆಯಲಾಗಿದೆ. ಹಾಗೆಯೇ ರಾಜಭವನಕ್ಕೆ ಸಿಸಿಟಿವಿ ದೃಶ್ಯಾವಳಿಗಳನ್ನು ಸಲ್ಲಿಸುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಸಂವಿಧಾನದ ಕಲಂ 361 ರ ಪ್ರಕಾರ ಹಾಲಿ ರಾಜ್ಯಪಾಲರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವಂತಿಲ್ಲ.

1. ಮಾರ್ಚ್ 24 ರಂದು ಕಾಯಂ ಕೆಲಸಕ್ಕಾಗಿ ರಾಜ್ಯಪಾಲರ ಬಳಿ ಹೋಗಿದ್ದಾಗ ರಾಜ್ಯಪಾಲರು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

2. ರಾಜಭವನವು ಕೂಡ ಒಂದು ಮನವಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ರಾಜ್ಯಪಾಲ ಬೋಸ್ ಅವರು ರಾಜಭವನಕ್ಕೆ ಪೊಲೀಸರ ಪ್ರವೇಶವನ್ನು ನಿಷೇಧಿಸಲಾಗಿದೆಯೆಂದು ತಿಳಿಸಿದ್ದಾರೆ. ಪೊಲೀಸರು ತಮ್ಮ ರಾಜಕೀಯ ಯಜಮಾನರನ್ನು ಮೆಚ್ಚಿಸುವ ಸಲುವಾಗಿ ಚುನಾವಣಾ ಸಮಯದಲ್ಲಿ ಅಕ್ರಮ ತನಿಖೆ ನಡೆಸಬಹುದು ಎಂದು ಮನವಿಯಲ್ಲಿ ಹೇಳಲಾಗಿದೆ.

ನನ್ನ ಅಪಕೀರ್ತಿಯ ಷಡ್ಯಂತ್ರ ! – ರಾಜ್ಯಪಾಲ ಬೋಸ

ರಾಜ್ಯಪಾಲರು ‘ಎಕ್ಸ್’ ಮೇಲೆ ಪೋಸ್ಟ್ ಮಾಡಿ, ಇದು ನನ್ನ ಮಾನಹಾನಿ ಮಾಡುವ ಷಡ್ಯಂತ್ರ ಎಂದು ಆರೋಪಿಸಿದ್ದಾರೆ. ನನ್ನ ವಿರುದ್ಧ ಆಧಾರ ರಹಿತ ಆರೋಪ ಮಾಡಲಾಗಿದೆ. ಸತ್ಯಕ್ಕೇ ಜಯ ಸಿಗುವುದು. ಭ್ರಷ್ಟಾಚಾರ ಮತ್ತು ಹಿಂಸಾಚಾರದ ವಿರುದ್ಧದ ಹೋರಾಟವನ್ನು ನಾನು ನಿಲ್ಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.