Jain Couple Took Sanyas: ಗುಜರಾತ್‌ನಲ್ಲಿ ಜೈನ ದಂಪತಿಗಳಿಂದ ತಮ್ಮ 200 ಕೋಟಿ ರೂಪಾಯಿ ಸಂಪತ್ತನ್ನು ದಾನ ಮಾಡಿ ಸನ್ಯಾಸ ಸ್ವೀಕಾರ !

ಭಾವೇಶ್ ಭಂಡಾರಿ ಮತ್ತು ಅವರ ಪತ್ನಿಯ ಮೆರವಣಿಗೆ

ಕರ್ಣಾವತಿ (ಗುಜರಾತ್) – ರಾಜ್ಯದ ಹಿಮ್ಮತ್‌ನಗರದ ಉದ್ಯಮಿ ದಂಪತಿಗಳು ತಮ್ಮ 200 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ದಾನ ಮಾಡಿ ಸನ್ಯಾಸ ಸ್ವೀಕರಿಸಲು ನಿರ್ಧರಿಸಿದ್ದಾರೆ. ಭಾವೇಶ್ ಭಂಡಾರಿ ಮತ್ತು ಅವರ ಪತ್ನಿ ಫೆಬ್ರವರಿ ತಿಂಗಳಿನಲ್ಲಿಯೇ ತಮ್ಮೆಲ್ಲ ಸಂಪತ್ತನ್ನು ತ್ಯಜಿಸಿ ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸಲು ನಿರ್ಧರಿಸಿದ್ದರು. ಈಗ ಅವರು ಅಧಿಕೃತವಾಗಿ ಎಲ್ಲಾ ಭೌತಿಕ ಸುಖಗಳನ್ನು ತ್ಯಜಿಸಿದ್ದಾರೆ. 2022 ರಲ್ಲಿ, ಅವರ ಇಬ್ಬರೂ ಪುತ್ರರು ಸನ್ಯಾಸಿಗಳಾಗಲು ನಿರ್ಧರಿಸಿದರು. ಭಂಡಾರಿ ದಂಪತಿಯ ಪುತ್ರರು ಭೌತಿಕ ಆಸೆಗಳನ್ನು ತೊರೆದು ಜೈನ ಸನ್ಯಾಸಿಗಳಾದರು. ಅವರಿಂದ ಸ್ಫೂರ್ತಿ ಪಡೆದು ಭಂಡಾರಿ ದಂಪತಿ ಈ ಹೆಜ್ಜೆ ಇಟ್ಟಿದ್ದಾರೆ.

ಏಪ್ರಿಲ್ 22 ರಂದು, ಸನ್ಯಾಸ ವ್ರತವನ್ನು ತೆಗೆದುಕೊಂಡ ನಂತರ, ದಂಪತಿಗಳು ತಮ್ಮ ವೈವಾಹಿಕ ಸಂಬಂಧವನ್ನು ತೊರೆದು ಎಲ್ಲಾ ಭೌತಿಕ ಸುಖಗಳನ್ನು ಶಾಶ್ವತವಾಗಿ ತ್ಯಜಿಸಬೇಕಾಗುತ್ತದೆ. ಭಿಕ್ಷುವಾದ ನಂತರ, ದಂಪತಿಗಳು ಕೇವಲ 2 ಬಿಳಿ ಬಟ್ಟೆಗಳನ್ನು, ಭಿಕ್ಷೆಗಾಗಿ ಒಂದು ಬಟ್ಟಲು ಮತ್ತು ‘ರಾಜಾರೋಹಣ’ವನ್ನು ಮಾತ್ರ ಒಯ್ಯಬಹುದು. ಜೈನ ಸನ್ಯಾಸಿಯ ಬಳಿ ಕುಳಿತಾಗ ನೆಲವನ್ನು ಗುಡಿಸುವುದಕ್ಕೆ ‘ರಾಜಾರೋಹಣ’ ಎಂಬ ಒಂದು ಬಗೆಯ ಪೊರಕೆಯನ್ನು ಬಳಸುತ್ತಾರೆ. ಕುಳಿತುಕೊಳ್ಳುವ ಪ್ರದೇಶದಿಂದ ಕೀಟಗಳನ್ನು ದೂರವಿರಿಸಲು ಇದನ್ನು ಬಳಸಲಾಗುತ್ತದೆ. ಇದರಿಂದ ಅಹಿಂಸಾತ್ಮಕ ಮಾರ್ಗವನ್ನು ಅಳವಡಿಸಿಕೊಳ್ಳಲಾಗುತ್ತದೆ.
ಇತ್ತೀಚೆಗೆ ಭಂಡಾರಿ ದಂಪತಿಯ 4 ಕಿ.ಮೀ ಉದ್ದದ ಮೆರವಣಿಗೆ ನಡೆಯಿತು. ಈ ಮೆರವಣಿಗೆಯಲ್ಲಿ ಅವರು ತಮ್ಮ ಮೊಬೈಲ್ ಫೋನ್ ಮತ್ತು ಇತರ ವಸ್ತುಗಳನ್ನು ದಾನ ಮಾಡಿದರು. ಮೆರವಣಿಗೆಯಲ್ಲಿ ಭಂಡಾರಿ ದಂಪತಿಯನ್ನು ರಾಜ ವಸ್ತ್ರದಲ್ಲಿ ರಥದಲ್ಲಿ ಕೂರಿಸಲಾಗಿತ್ತು.

ಸಂಪಾದಕೀಯ ನಿಲುವು

ಜೈನ ಸಮಾಜದಲ್ಲಿ ಈಶ್ವರಪ್ರಾಪ್ತಿಗಾಗಿ ಭೌತಿಕ ಭೋಗಗಳನ್ನು ತ್ಯಜಿಸಿದವರನ್ನು ಮೆರವಣಿಗೆ ಮಾಡುವ ಮೂಲಕ ಗೌರವಿಸಲಾಗುತ್ತದೆ ಹಾಗೂ ಹಿಂದೂಗಳಲ್ಲಿ ಅಧ್ಯಾತ್ಮದ ಹಾದಿ ಹಿಡಿದವರನ್ನು ಜನ್ಮ ಹಿಂದೂಗಳು ಅಪಹಾಸ್ಯ ಮಾಡುತ್ತಾರೆ. ಹಿಂದೂಗಳು ಏಕೆ ಹದಗೆಟ್ಟಿದ್ದಾರೆ ಎಂದು ತಿಳಿಯಲು ಈ ಉದಾಹರಣೆ ಸಾಕಾಗುವುದಿಲ್ಲವೇ ?