ಮಗುವಿನ ಜನನ ನೋಂದಾಯಿಸುವಾಗ, ಧರ್ಮದ ಮಾಹಿತಿ ಅಗತ್ಯ !

ಕೇಂದ್ರ ಸರಕಾರದಿಂದ ಜನನ ಪ್ರಮಾಣಪತ್ರದ ನಿಯಮಗಳಲ್ಲಿ ಬದಲಾವಣೆ

ನವದೆಹಲಿ – ಕೇಂದ್ರ ಗೃಹ ಸಚಿವಾಲಯದ ನೂತನ ನಿಯಮಗಳ ಪ್ರಕಾರ, ಮಗುವಿನ ಜನನವನ್ನು ನೋಂದಾಯಿಸುವಾಗ ಮಗುವಿನ ತಂದೆ ಮತ್ತು ತಾಯಿ ಇಬ್ಬರೂ ತಮ್ಮ ಧರ್ಮವನ್ನು ಪ್ರತ್ಯೇಕವಾಗಿ ನಮೂದಿಸಬೇಕಾಗುತ್ತದೆ. ಈಗ ಚಾಲ್ತಿಯಲ್ಲಿರುವ ನಿಯಮದ ಪ್ರಕಾರ ಕುಟುಂಬದ ಧರ್ಮವನ್ನು ಮಾತ್ರ ದಾಖಲಿಸಲಾಗುತ್ತಿದೆ. ಮಗುವನ್ನು ದತ್ತು ತೆಗೆದುಕೊಳ್ಳುವಾಗಲೂ ಈ ಹೊಸ ನಿಯಮ ಅನ್ವಯಿಸಲಿದೆ. ಮಗುವನ್ನು ದತ್ತು ತೆಗೆದುಕೊಳ್ಳುವ ಪೋಷಕರು ತಮ್ಮ ಧರ್ಮವನ್ನು ಉಲ್ಲೇಖಿಸುವುದು ಅನಿವಾರ್ಯ.

ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯ್ದೆಯನ್ನು 11 ಆಗಸ್ಟ್ 2023 ರಂದು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಈ ಕಾಯ್ದೆಯಲ್ಲಿ ಜನನ ಮತ್ತು ಮರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ರಾಷ್ಟ್ರಮಟ್ಟದಲ್ಲಿ ಸಂಗ್ರಹಿಸಲಾಗುವುದು ಎಂದು ಹೇಳಲಾಗಿದೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್.ಪಿ.ಆರ್.) ಅನ್ನು ನವೀಕರಿಸಲು ಈ ಮಾಹಿತಿಯನ್ನು ಬಳಸಬಹುದು. ಇದರೊಂದಿಗೆ ಮತದಾರರ ಪಟ್ಟಿ, ಆಧಾರ್ ಕಾರ್ಡ್, ಪಡಿತರ ಚೀಟಿ, ಪಾಸ್‌ಪೋರ್ಟ್, ವಾಹನ ಪರವಾನಗಿ, ಆಸ್ತಿ ನೋಂದಣಿ ಮತ್ತು ಇತರ ಪ್ರಮುಖ ದಾಖಲೆಗಳಿಗೆ ಈ ಮಾಹಿತಿ ಬಳಸಬಹುದು.