ಆನ್‌ಲೈನ್‌ನಲ್ಲಿ ಖಾದ್ಯ ಪದಾರ್ಥಗಳನ್ನು ತರಿಸುವವರಿಗೆ ಭಯ ಹುಟ್ಟಿಸುವ ಘಟನೆ !
ಪಟಿಯಾಲ (ಪಂಜಾಬ್) – ತನ್ನ ಹುಟ್ಟುಹಬ್ಬಕ್ಕೆ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಕೇಕ್ ತಿಂದು 10 ವರ್ಷದ ಬಾಲಕಿ ಮಾನ್ವಿ ಸಾವನ್ನಪ್ಪಿದ್ದಾಳೆ. ಕೇಕ್ ತಿಂದ ನಂತರ ಮನೆಯಲ್ಲಿದ್ದವರೂ ಅಸ್ವಸ್ಥರಾದರು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿರುವ ವೀಡಿಯೋವೊಂದರಲ್ಲಿ ಕೇಕ್ ತಿನ್ನುವ ಮುನ್ನ ಮಾನ್ವಿ ಪರಿಪೂರ್ಣ ಆರೋಗ್ಯ ಸ್ಥಿತಿಯಲ್ಲಿರುವುದು ಕಾಣುತ್ತಿತ್ತು. ಪೊಲೀಸರು ಈ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಬಾಲಕಿಯ ಮನೆಯವರು ನೀಡಿದ ಮಾಹಿತಿ ಮೇರೆಗೆ ಅಪರಾಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನಾವು ಸಂಜೆ 6 ಗಂಟೆಗೆ ಆನ್‌ಲೈನ್ ಮೂಲಕ ಕೇಕ್ ಆರ್ಡರ್ ಮಾಡಿದೆವು 6.15ಕ್ಕೆ ಕೇಕ್ ಬಂದಿತು, 7 ಗಂಟೆಗೆ ಕೇಕ್ ಕತ್ತರಿಸಲಾಯಿತು, ಈ ಕೇಕ್ ತಿಂದ ಎಲ್ಲರ ಆರೋಗ್ಯ ಬಿಗಡಾಯಿಸಿದೆ ಎಂದು ಬಾಲಕಿಯ ಅಜ್ಜ ಹೇಳಿದ್ದಾರೆ.
ಕೆಲವರಿಗೆ ತಲೆತಿರುಗಲು ಪ್ರಾರಂಭವಾಯಿತು, ಕೆಲವರು ವಾಂತಿ ಮಾಡಿದರು. ಮಾನ್ವಿ ಮತ್ತು ಆಕೆಯ 8 ವರ್ಷದ ಸಹೋದರಿ ಕೂಡ ಕೇಕ್ ತಿಂದಿದ್ದಾರೆ. ಇಬ್ಬರೂ ವಾಂತಿ ಮಾಡಿಕೊಂಡರು. ಚಿಕ್ಕ ತಂಗಿ ಮಾನ್ವಿಗಿಂತ ಹೆಚ್ಚು ವಾಂತಿ ಮಾಡಿದ್ದಾಳೆ. ಮಾನ್ವಿಯ ಬಾಯಿಂದ ನೊರೆ ಬಂದಿತು. ವಾಂತಿ ಮಾಡಿದ್ದರಿಂದ ಸ್ವಲ್ಪ ಸಮಯದ ನಂತರ ಸರಿಯಾಗುವುದು ಎಂದು ನಾವು ಭಾವಿಸಿದೆವು; ಏಕೆಂದರೆ ವಾಂತಿ ಮಾಡಿದ ನಂತರ ಮಾನ್ವಿ ನಿದ್ರೆಗೆ ಜಾರಿದಳು. ಸ್ವಲ್ಪ ಸಮಯದ ನಂತರ ಅವಳು ಬಂದು ನೀರು ಕೇಳಿದಳು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಆಕೆಯನ್ನು ನೋಡಿದಾಗ ಆಕೆಯ ದೇಹ ತಣ್ಣಗಾಗಿತ್ತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು.