ಬಿಜಾಪುರ (ಛತ್ತೀಸ್‌ಗಢ) – ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಇತ್ತೀಚೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 6 ನಕ್ಸಲೀಯರನ್ನು ಭದ್ರತಾ ಪಡೆಗಳು ಮಟ್ಟಹಾಕಿವೆ. ಈ ಘಟನೆಯನ್ನು ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಅವರು ಖಚಿತಪಡಿಸಿದ್ದಾರೆ.
ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಬಾಸಾಗುಡ ಪ್ರದೇಶದ ಗ್ರಾಮಕ್ಕೆ ನಕ್ಸಲೀಯರು ಹೋಳಿ ಹಬ್ಬದದಂದು ನುಗ್ಗಿದ್ದರು. ನಕ್ಸಲೀಯರು ಅಲ್ಲಿನ 3 ಗ್ರಾಮಸ್ಥರ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆಗೈದಿದ್ದರು. ಮೃತರನ್ನು ಚಂದ್ರಯ್ಯ ಮೋಡಿಯಂ, ಅಶೋಕ್ ಭಂಡಾರಿ ಮತ್ತು ಕಾರಂ ರಮೇಶ್ ಎಂದು ಗುರುತಿಸಲಾಗಿದೆ. ಹತ್ಯೆಗೊಂಡ ಈ ಮೂವರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು ಎಂದು ಶಂಕಿಸಿ ಅವರನ್ನು ನಕ್ಸಲೀಯರು ಕೊಂದಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯ ಬಳಿಕ ಭದ್ರತಾ ಪಡೆಗಳ ಜಂಟಿ ತಂಡ ಹಾಗೂ ನಕ್ಸಲೀಯರ ನಡುವೆ ಗುಂಡಿನ ಚಕಮಕಿ ನಡೆದಿದೆ. ಘಟನಾ ಸ್ಥಳದಿಂದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.