ಉಜ್ಜಯಿನಿ (ಮಧ್ಯಪ್ರದೇಶ) ಶ್ರೀ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಭಸ್ಮ ಆರತಿಯ ಸಮಯದಲ್ಲಿ ಚೆಲ್ಲಿದ ಗುಲಾಲ್‌ನಿಂದ ಬೆಂಕಿ !

ಅರ್ಚಕ ಸೇರಿ 13 ಮಂದಿಗೆ ಗಾಯ

ಉಜ್ಜಯಿನಿ (ಮಧ್ಯಪ್ರದೇಶ) – 12 ಜ್ಯೋತಿರ್ಲಿಂಗಗಳಲ್ಲೊಂದಾದ ಶ್ರೀ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಮಾರ್ಚ್ 25 ರಂದು ಭಸ್ಮ ಆರತಿಯ ಸಮಯದಲ್ಲಿ ಗುಲಾಲ್ ನಿಂದಾಗಿ ಹಠಾತ್ ಬೆಂಕಿ ಕಾಣಿಸಿಕೊಂಡಿತು. ಈ ಘಟನೆಯಲ್ಲಿ ಅರ್ಚಕ ಸೇರಿದಂತೆ 13 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರತಿ ವೇಳೆ ಗುಲಾಲ್ ಎಸೆದಾಗ ಈ ಘಟನೆ ನಡೆದಿದೆ. ಅರ್ಚಕ ಸಂಜೀವ್ ಅವರ ಮೇಲೂ ವ್ಯಕ್ತಿಯೊಬ್ಬ ಗುಲಾಲ್ ಎಸೆದಾಗ ಅವರ ಕೈಯಲ್ಲಿ ಆರತಿಯ ತಟ್ಟೆ ಇತ್ತು. ಗುಲಾಲ್‌ನಲ್ಲಿನ ರಾಸಾಯನಿಕದಿಂದಾಗಿ ಬೆಂಕಿಯ ಸ್ಪರ್ಶದಿಂದ ಅದು ಹೊತ್ತಿಕೊಂಡಿರಬಹುದು ಎಂದು ಕೆಲ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. (ಹೋಳಿಯಲ್ಲಿ ‘ರಾಸಾಯನಿಕ ಬಣ್ಣಗಳನ್ನು ಬಳಸಬಾರದು’, ಎಂಬ ಜಾಗೃತಿ ಮೂಡಿಸುವುದರೊಂದಿಗೆ ಅಂತಹ ಬಣ್ಣಗಳ ಉತ್ಪಾದನೆಯನ್ನು ನಿಲ್ಲಿಸಲು ಸರಕಾರವು ಪ್ರಯತ್ನಿಸಬೇಕು! – ಸಂಪಾದಕರು) ‘ಗರ್ಭಗುಡಿಯಲ್ಲಿ ಗುಲಾಲ್ ಅನ್ನು ಎಸೆಯಬಾರದು’ ಎಂಬ ಸೂಚನಾ ಫಲಕಗಳನ್ನು ಹಾಕಲಾಗಿದ್ದು, ಆ ಫಲಕಗಳು ಈ ಬೆಂಕಿಯಲ್ಲಿ ಸುಟ್ಟುಹೋಗಿವೆ. ( ಗರ್ಭಗುಡಿಯಲ್ಲಿ ಗುಲಾಲ್ ಎಸೆಯದಂತೆ ಸೂಚನೆ ಇರುವಾಗಲೂ ಕೂಡ ಅದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಆಗ ಯಾರೂ ಪುನಃ ಇಂತಹ ಕೃತ್ಯ ಮಾಡುವುದಿಲ್ಲ ! – ಸಂಪಾದಕರು ) ಬೆಂಕಿ ಹೊತ್ತಿಕೊಂಡ ತಕ್ಷಣ ಅಗ್ನಿಶಾಮಕ ದಳವನ್ನು ಕರೆಸಿ ಬೆಂಕಿಯನ್ನು ಹತೋಟಿಗೆ ತರಲಾಯಿತು.