ನವದೆಹಲಿ – ಭಾರತದ ರಾಜಧಾನಿ, ದೆಹಲಿಯು ಪಾಂಡವರ ಮೂಲ ರಾಜಧಾನಿ ‘ಇಂದ್ರಪ್ರಸ್ಥ’ ಎಂದು ಹೇಳಲಾಗುತ್ತಿದೆ. ಇದರ ಪುರಾವೆಗಳನ್ನು ಸಂಗ್ರಹಿಸಲು ಕಳೆದ 60 ರಿಂದ 70 ವರ್ಷಗಳಿಂದ ವಿವಿಧ ಸಮಯಗಳಲ್ಲಿ ಉತ್ಖನನಗಳನ್ನು ನಡೆಸಲಾಗಿದೆ. ಈಗ ಆರನೇ ಬಾರಿಗೆ ಉತ್ಖನನ ಅಭಿಯಾನ ಕೈಗೆತ್ತಿಕೊಳ್ಳಲಾಗುವುದು. ಇಂದ್ರಪ್ರಸ್ಥವನ್ನು ಹುಡುಕುವ ಕೊನೆಯ ಪ್ರಯತ್ನ ಇದಾಗಿದೆ ಎಂದು ಹೇಳಲಾಗುತ್ತಿದೆ. ರಾಜಧಾನಿಯ ಪುರಾಣ ಕೋಟೆಯಲ್ಲಿ ಉತ್ಖನನಗಳು ಮುಂದಿನ ತಿಂಗಳಿನಿಂದ ಪ್ರಾರಂಭವಾಗುವ ಸಾಧ್ಯತೆಯಿದೆ. ಇದನ್ನು ಪಾಂಡವರ ಕೋಟೆ ಎಂದು ಪರಿಗಣಿಸಲಾಗಿದೆ.
ಹಿಂದಿನ 5 ಉತ್ಖನನಗಳಲ್ಲಿ, ವಿಷ್ಣು, ಗಣೇಶ ಮತ್ತು ಲಕ್ಷ್ಮಿ ವಿಗ್ರಹಗಳು ಸೇರಿದಂತೆ ಮೌರ್ಯರ ಕಾಲದ ವಿವಿಧ ಕಾಲದ ಅವಶೇಷಗಳು ಕಂಡುಬಂದಿವೆ. ಈ ಅವಶೇಷಗಳು 2 ಸಾವಿರದ 500 ವರ್ಷಗಳಷ್ಟು ಹಳೆಯವು ಎಂದು ಅಂದಾಜಿಸಲಾಗಿದೆ. ಭಾರತ ಸರಕಾರದ ಸೂಚನೆಗಳನ್ನು ಅನುಸರಿಸಿ, ಈ ಬಾರಿ ಅತ್ಯಾಧುನಿಕ ತಂತ್ರಜ್ಞಾನವನ್ನು ಉತ್ಖನನದಲ್ಲಿ ಬಳಸಲಾಗುವುದು. ಪುರಾತತ್ವ ಇಲಾಖೆಯು ಅತ್ಯಾಧುನಿಕ ವ್ಯವಸ್ಥೆಯಡಿ ‘ಲಿಡರ್’ ಸಮೀಕ್ಷೆಯನ್ನು ಯೋಜಿಸುತ್ತಿದೆ. ಈ ಮೂಲಕ ಮಣ್ಣಿನ ಅಡಿಯಲ್ಲಿ ಹೂತಿರುವ ಅವಶೇಷಗಳನ್ನು ಕಂಡುಹಿಡಿಯಲಾಗುತ್ತದೆ. ಇದರ ಜವಾಬ್ದಾರಿಯನ್ನು ಹಿರಿಯ ಅಧಿಕಾರಿ ವಸಂತ ಸ್ವರ್ಣಕರ್ ಅವರಿಗೆ ನೀಡಲಾಗಿದೆ. ಅವರೇ ಪುರಾಣ ಕೋಟೆಯನ್ನು ಮೂರು ಬಾರಿ ಉತ್ಖನನ ಮಾಡಿದ್ದಾರೆ.
ಸಮೀಕ್ಷೆ ನಡೆಸಿದ್ದು ಯಾವಾಗ ?
1954-55 ರಲ್ಲಿ ಪುರಾತತ್ವ ಇಲಾಖೆಯ ಮಾಜಿ ಮಹಾನಿರ್ದೇಶಕ ಪ್ರೊ. ಬಿ.ಬಿ. ಲಾಲ್ ಅವರ ಮೇಲ್ವಿಚಾರಣೆಯಲ್ಲಿ ಮೊದಲ ಉತ್ಖನನ ಮಾಡಲಾಯಿತು. 1969-1973 ರಲ್ಲಿ ಎರಡನೇ ಉತ್ಖನನದ ನಂತರ, 41 ವರ್ಷಗಳ ಅಂತರದ ನಂತರ 2013-14 ರಲ್ಲಿ ಉತ್ಖನನ ನಡೆಯಿತು. ಇದರ ನಂತರ 2017-2018 ಮತ್ತು ಅಂತಿಮವಾಗಿ 2022-23 ರಲ್ಲಿ ಉತ್ಖನನಗಳು ನಡೆದವು.
ಉತ್ಖನನದಲ್ಲಿ ಸಿಕ್ಕಿದ್ದು ಏನು ?
ಇದುವರೆಗಿನ ಉತ್ಖನನದಲ್ಲಿ ಟೆರಾಕೋಟಾ ಆಟಿಕೆಗಳು ಮತ್ತು ಕಂದು ಬಣ್ಣದ ಮಡಿಕೆಗಳ ತುಂಡುಗಳು ದೊರೆತಿವೆ. ಈ ಮಡಿಕೆಗಳು 1000 ವರ್ಷದಷ್ಟು ಹಿಂದಿನವು. ಮಹಾಭಾರತಕ್ಕೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ಇಂತಹ ಪುರಾವೆಗಳನ್ನು ಹೊಂದಿರುವ ಮಡಕೆಗಳು ಕಂಡುಬಂದಿವೆ. ಅವರ ಕಾಲವನ್ನು ಕ್ರಿ.ಪೂ. 9000 ಎಂದು ನಿರ್ಧರಿಸಲಾಗಿತ್ತು. ಆದರೂ ಇಲ್ಲಿಯವರೆಗೆ ಉತ್ಖನನದಲ್ಲಿ ಯಾವುದೇ ನಗರ ರಚನೆಗಳು ಕಂಡುಬಂದಿಲ್ಲ. 2023 ರಲ್ಲಿ ನಡೆಸಿದ ಉತ್ಖನನಗಳು ಮೌರ್ಯರ ಕಾಲ, ಶುಂಗ ಕಾಲ, ಕುಶಾನರ ಕಾಲ, ಗುಪ್ತರ ಕಾಲ, ರಜಪೂತರ ಕಾಲ, ಸುಲ್ತಾನರ ಕಾಲ ಮತ್ತು ನಂತರದ ಮೊಘಲರ ಕಾಲದ ಅವಶೇಷಗಳು ಪತ್ತೆಯಾಗಿದ್ದವು.
1955 ರಲ್ಲಿ, ಹಳೆಯ ಕೋಟೆಯ ಆಗ್ನೇಯ ಭಾಗದಲ್ಲಿ ಉತ್ಖನನದ ಸಮಯದಲ್ಲಿ, ಮಹಾಭಾರತದ ಕಾಲದ ವಸ್ತುಗಳಿಗೆ ಹೊಂದಿಕೆಯಾಗುವ ಮಣ್ಣಿನ ತುಂಡುಗಳು ಪತ್ತೆಯಾದವು. ಆದರೂ, ಪುರಾತತ್ವ ಇಲಾಖೆ ಇನ್ನೂ ಬಲವಾದ ಪುರಾವೆಗಳನ್ನು ಹುಡುಕುತ್ತಿದೆ.