ಎಸ್‌.ಬಿ.ಐ.ನಿಂದ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ಗಳ ಎಲ್ಲಾ ಮಾಹಿತಿ ಸಲ್ಲಿಕೆ

ಸರ್ವೋಚ್ಛ ನ್ಯಾಯಾಲಯ ಆದೇಶದ ಪರಿಣಾಮ !

ನವ ದೆಹಲಿ – ಸರ್ವೋಚ್ಛ ನ್ಯಾಯಾಲಯದ ಕಟ್ಟುನಿಟ್ಟಿನ ಆದೇಶದ ನಂತರ ಚುನಾವಣಾ ಬಾಂಡ್‌ಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಂತಿಮವಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಈ ಮಾಹಿತಿಯನ್ನು ಶೀಘ್ರದಲ್ಲೇ ಚುನಾವಣಾ ಆಯೋಗದ ಜಾಲತಾಣದಲ್ಲಿ ಪ್ರಸಾರಮಾಡಲಾಗುವುದು. ಚುನಾವಣಾ ಆಯೋಗ ‘ಎಕ್ಸ‘ ನಿಂದ ಈ ಮಾಹಿತಿ ನೀಡಿದೆ. ಮಾರ್ಚ್ ೧೦ ರಂದು ನಡೆದ ವಿಚಾರಣೆಯಲ್ಲಿ, ಮಾರ್ಚ್ ೧೨ ರ ಒಳಗೆ ಎಲ್ಲಾ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಸರ್ವೋಚ್ಛ ನ್ಯಾಯಾಲಯವು ಎಸ್.ಬಿ.ಐ.ಗೆ ಆದೇಶಿಸಿತ್ತು. ಎಸ್.ಬಿ.ಐ. ‘ಈ ಮಾಹಿತಿ ನೀಡಲು ೪ ತಿಂಗಳು ಬೇಕು‘ ಎಂದು ಹೇಳಿತ್ತು. ಈ ಬಗ್ಗೆ ನ್ಯಾಯಾಲಯವು ಕಟುವಾಗಿ ಪ್ರತಿಕ್ರಿಯಿಸಿತ್ತು.

ಫೆಬ್ರವರಿ ೧೫ ರಂದು ಸರ್ವೋಚ್ಛ ನ್ಯಾಯಾಲಯವು ಕೇಂದ್ರ ಸರಕಾರ ಘೋಷಿಸಿದ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿತ್ತು. ಈ ಯೋಜನೆ ಸಂವಿಧಾನಬಾಹಿರವಾಗಿದೆ ಎಂದು ಹೇಳಿದ ನ್ಯಾಯಾಲಯವು, ೨೦೧೯ ರ ಎಲ್ಲಾ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಎಸ್.ಬಿ.ಐ.ಗೆ ಆದೇಶಿಸಿತ್ತು. ಇದಕ್ಕಾಗಿ ನ್ಯಾಯಾಲಯವು ಮಾರ್ಚ್ ೬ ರ ವರೆಗೆ ಗಡವು ನೀಡಿತ್ತು. ಆನಂತರ ಎಸ್.ಬಿ.ಐ. ಕಾಲಮಿತಿಯನ್ನು ವಿಸ್ತರಿಸುವಂತೆ ಕೋರಿ ಸರ್ವೋಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು; ಆದರೆ ಈ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯವು ಎಸ್.ಬಿ.ಐ.ಗೆ ಛೀಮಾರಿ ಹಾಕಿದ್ದು ಮಾರ್ಚ್ ೧೨ ರ ಸಂಜೆ ೫ ರೊಳಗೆ ಈ ಸಂಪೂರ್ಣ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಆದೇಶಿಸಿತ್ತು.

ಸಂಪಾದಕೀಯ ನಿಲುವು

ಈ ಮಾಹಿತಿಗೆ ೪ ತಿಂಗಳು ಬೇಕಾಗಬಹುದು, ಎಂದು ಹೇಳುವ ಎಸ್.ಬಿ.ಐ ಕೇವಲ ೪೮ ಗಂಟೆಗಳಲ್ಲಿ ಅದೇ ಮಾಹಿತಿಯನ್ನು ಹೇಗೆ ಪ್ರಸ್ತುತ ಪಡಿಸುತ್ತದೆ? ಇದರರ್ಥ ಎಸ್.ಬಿ.ಐ. ನ್ಯಾಯಾಲಯಕ್ಕೆ ದಿಕ್ಕು ತಪ್ಪಿಸುವ ಮತ್ತು ಸುಳ್ಳು ಹೇಳಲು ಪ್ರಯತ್ನಿಸುತ್ತಿತ್ತು, ಎಂದು ಹೇಳಬೇಕಾಗುತ್ತದೆ!  ‘ಇಂತಹ ಬ್ಯಾಂಕ್‌ಗಳು ಜನರೊಂದಿಗೆ ಹೇಗೆ ವರ್ತಿಸುತ್ತವೆ’, ಇದನ್ನು ಊಹಿಸಲು ಸಾಧ್ಯವಿಲ್ಲ!