ನೆಲಮಂಗಲದಲ್ಲಿ ದೇವಸ್ಥಾನಗಳ ಪರಿಷತ್ ಯಶಸ್ವೀ ಸಂಪನ್ನ !
ನೆಲಮಂಗಲ : ರಾಜ್ಯ ಸರಕಾರ ನೂರಾರು ಕೋಟಿ ರೂಪಾಯಿಗಳನ್ನು ಅನ್ಯಮತೀಯರ ಧಾರ್ಮಿಕ ಸ್ಥಳಗಳಿಗೆ ನೀಡಿದೆ. ಆದರೆ ಹಿಂದೂ ಧಾರ್ಮಿಕ ಸ್ಥಳಗಳಿಗೆ ಮಾತ್ರ ಬಜೆಟ್ ನಲ್ಲಿ ನಯಾಪೈಸೆಯನ್ನು ನೀಡುವುದಿಲ್ಲ. ರಾಜ್ಯದ 34,000 `ಸಿ ಗ್ರೇಡ್’ ದೇವಸ್ಥಾನಗಳ ಅರ್ಚಕರಿಗೆ ಯಾವುದೇ ಸಂಬಳ ಇಲ್ಲ. ಆದರೆ ಇಮಾಮ್ ಗಳಿಗೆ 8000 ರೂಪಾಯಿ ಸಂಬಳ ನೀಡಲಾಗುತ್ತದೆ. ವಕ್ಫ್ ಬೋರ್ಡ ಕಂಪೌಂಡ್ ಗಾಗಿ 31.54 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ ದೇವಸ್ಥಾನಗಳ ಜಮೀನುಗಳ ರಕ್ಷಣೆಗೆ ನಯಾಪೈಸೆಯನ್ನು ಬಿಡುಗಡೆ ಮಾಡಿಲ್ಲ, 10 ಸಾವಿರ ಕೋಟಿ ರೂಪಾಯಿ ಮೌಲ್ಯದ ಸರಕಾರಿ ದೇವಸ್ಥಾನಗಳ ಜಮೀನುಗಳು ಅತಿಕ್ರಮಣವಾಗಿದೆ, ದೇವಸ್ಥಾನಗಳ ಅಬಿವೃದ್ದಿಗಾಗಿ ರಾಜ್ಯ ಸರಕಾರ ಅನುದಾನ ಬಿಡುಗಡೆ ಮಾಡಬೇಕು’ ಎಂದು ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಯೋಜಕರಾದ ಶ್ರೀ. ಮೋಹನ್ ಗೌಡ ಒತ್ತಾಯಿಸಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿ ಹಾಗೂ ದೇವಸ್ಥಾನಗಳ ಮಹಾಸಂಘದ ವತಿಯಿಂದ ಮಾರುತಿನಗರದ ಅರಿಶಿನಕುಂಟೆಯಲ್ಲಿ ಆಯೋಜಿಸಲಾದ ದೇವಸ್ಥಾನಗಳ ಪರಿಷತ್ತನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ನೆಲಮಂಗಲದ ಶ್ರೀಪವಾಡ ಬಸವಣ್ಣ ದೇವರ ಮಠದ ಪೂಜ್ಯ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಶ್ರೀ. ಮೋಹನ್ ಗೌಡ, ನೆಲಮಂಗಲ ಪುರಸಭೆ ಸದಸ್ಯರಾದ ಶ್ರೀ. ರವಿ, ಶ್ರೀವೈಷ್ಣವ ಸಂಘ, ಟಿ. ಬೇಗೂರು ಇದರ ಅಧ್ಯಕ್ಷರಾದ ಶ್ರೀ. ಅಣ್ಣಯ್ಯ ಇವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿವಿಧ ದೇವಸ್ಥಾನಗಳ ವಿಶ್ವಸ್ಥರು, ದೇವಸ್ಥಾನಗಳ ಪ್ರತಿನಿಧಿಗಳು, ಪುರೋಹಿತರು, ಅರ್ಚಕರು ಸೇರಿದಂತೆ 150 ಕ್ಕೂ ಹೆಚ್ಚು ಪ್ರತಿನಿಧಿಗಳು ಉಪಸ್ಥಿತರಿದ್ದರು.
ಪುರೋಹಿತರು, ಮಠಾಧೀಶರು ಹಿಂದೂ ಸಮಾಜಕ್ಕೆ ನಮ್ಮ ಧರ್ಮದ ಆಚಾರ, ವಿಚಾರ, ಸಂಸ್ಕಾರವನ್ನು ತಿಳಿಸಲು ಮುಂದಾಗಬೇಕು ! – ಪೂಜ್ಯ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಶ್ರೀಪವಾಡ ಬಸವಣ್ಣ ದೇವರ ಮಠ, ನೆಲಮಂಗಲ
@HinduJagrutiOrg & Devasthan Mahasangh jointly successfully organised Nelamangala Taluku Leval Temple convention at Nelamangala, bengaluru.
More than 150 Temples trustees, priests participated & resolved to work for protection of temples, spreading hindu Jagruti through temples. pic.twitter.com/PRCAl24aJ0
— 🚩Mohan gowda🇮🇳 (@Mohan_HJS) February 29, 2024
ದೇವಸ್ಥಾನಗಳ ರಕ್ಷಣೆಗಾಗಿ ಹೋರಾಟ ಮಾಡುವುದು ಪ್ರಸ್ತುತ ಸಮಯದ ಅವಶ್ಯಕತೆಯಾಗಿದೆ. ಸಮಾಜದಲ್ಲಿ ಅಸಾಧ್ಯವಾದುದನ್ನು ಸಾಧಿಸುವ ಶಕ್ತಿ ನಮ್ಮ ದೇವಸ್ಥಾನಗಳಿಗಿದೆ, ದೇವಸ್ಥಾನಗಳು, ಮಠಗಳ ಮೂಲಕ ಸಮಾಜವನ್ನು ಸುಸಂಸ್ಕಾವನ್ನಾಗಿಸುವ ಕಾರ್ಯವಾಗಬೇಕಿದೆ’ ಎಂದು ಆಶಯ ವ್ಯಕ್ತಪಡಿಸಿದರು. ನೆಲಮಂಗಲ ಪುರಸಭೆಯ ಸದಸ್ಯರಾದ ಶ್ರೀ. ರವಿ ಇವರು ಮಾತನಾಡಿ, `ನಮ್ಮ ದೇವಸ್ಥಾನಗಳ ಸ್ಥಿರಾಸ್ತಿಗಳನ್ನು ನೋಂದಣೆ ಮಾಡಿ ಈ ಆಸ್ತಿಗಳನ್ನು ಉಳಿಸಿಕೊಳ್ಳಬೇಕು, ಧರ್ಮಕಾರ್ಯವನ್ನು ಮಾಡುವ ದೇವಸ್ಥಾನಗಳನ್ನು ರಕ್ಷಣೆ ಮಾಡಿ ಉಳಿಸಿಕೊಂಡರೆ ನಾವು ಉಳಿಯುತ್ತೇವೆ, ನಾವು ಉಳಿದರೆ ನಮ್ಮ ರಾಷ್ಟ್ರ ಉಳಿಯುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಚಂದ್ರ ಮೊಗವೀರ ಮಾತನಾಡಿ, `ಸರಕಾರೀಕರಣಗೊಂಡ ದೇವಸ್ಥಾನಗಳ ಅಭಿವೃದ್ಧಿಗೆ ಹಣ ಬಿಡುಗಡೆಗಾಗಿ ವರ್ಷಗಳ ಕಾಲ ಕಾಯಬೇಕಾಗುತ್ತದೆ, ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನದ ಹಣವನ್ನು ದೇವಾಲಯದ ಅಭಿವೃದ್ಧಿಗಾಗಿ ಬಳಸದೆ ಸರಕಾರಿ ಅಧಿಕಾರಿಗಳ ಕಾರ್ಯಾಲಯದ ಟೆಲಿಫೋನ್ ಬಿಲ್ ಪೇಮೆಂಟ್ ಮಾಡಿದ್ದಾರೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಬಿಲ್ ಪೇಮೆಂಟ್ ಮಾಡಿರುವುದು ಆರ್.ಟಿ.ಐ ಮೂಲಕ ಬೆಳಕಿಗೆ ಬಂದಿದೆ. ಸಮಿತಿಯ ಹೋರಾಟದ ಫಲವಾಗಿ ಹಲವಾರು ಯಶಸ್ಸು ಸಿಕ್ಕಿದ್ದು, ದೇವಾಲಯ ಹಾಗೂ ಸಮಾಜದಲ್ಲಿ ಹಿಂದೂ ಧರ್ಮದ ಜ್ಞಾನವನ್ನು ನೀಡುತ್ತಿದೆ. ಸರಕಾರೀಕರಣಗೊಂಡ ದೇವಸ್ಥಾನಗಳ ಮುಕ್ತಿಗಾಗಿ ದೇವಸ್ಥಾನದ ಪ್ರತಿನಿಧಿಗಳು ಸಂಘಟಿರಾಗಿ ಹೋರಾಟ ಮಾಡೋಣ’ ಎಂದು ಕರೆ ನೀಡಿದರು. ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶರತ್ ಕುಮಾರ್ ಮಾತನಾಡಿ, `ದೇವಸ್ಥಾನಗಳು ಹಿಂದೂ ಧರ್ಮದ ಆಧಾರ ಸ್ತoಭವಾಗಿದೆ. ಪ್ರಾಚೀನ ಕಾಲದಿಂದಲೂ ದೇವಸ್ಥಾನದಲ್ಲಿ ಸಂಸ್ಕಾರಯುತವಾಗಿ ನಡೆದುಕೊಂಡು ಬರುತ್ತಿರುವ ಸಮಾಜ ಆಧುನಿಕತೆಗೆ ಒಳಗಾಗಿ ಅಸಭ್ಯ ಉಡುಪುಗಳನ್ನು ಧರಿಸಿ ದೇವಸ್ಥಾನಕ್ಕೆ ಬರುತ್ತಿದ್ದಾರೆ, ಆದ್ದರಿಂದ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆಯನ್ನು ಅಳವಡಿಸುವುದು ಅನಿವಾರ್ಯವಾಗಿದೆ, ಜಾತ್ಯಾತೀತ ಸರಕಾರಗಳು ಹಿಂದೂ ಧರ್ಮದ ಆಚರಣೆಗಳ ಬಗ್ಗೆ ಅನವಶ್ಯಕವಾಗಿ ಹಸ್ತಕ್ಷೇಪ ಮಾಡುತ್ತಿದೆ, ಆದರೆ ಅನ್ಯಧರ್ಮೀಯರ ಆಚರಣೆಗಳ ಬಗ್ಗೆ ಚಕಾರವೆತ್ತುವುದಿಲ್ಲ’ ಎಂದರು.
ನೆಲಮಂಗಲ ಮುಜರಾಯಿ ದೇವಸ್ಥಾನಗಳ ಅರ್ಚಕರ ಸಂಘದ ಅಧ್ಯಕ್ಷ ಶ್ರೀ. ಅಣ್ಣಯ್ಯ ಸ್ವಾಮಿ ಮಾತನಾಡಿ, `ಅರ್ಚಕರು ಭಕ್ತರಲ್ಲಿ ಜನಜಾಗೃತಿ ಮೂಡಿಸಬೇಕು, ಅರ್ಚಕರು ದೇವಸ್ಥಾನಗಳ ಮೂಲಕ ಧರ್ಮ ಉಳಿಸಲು ಶ್ರಮಿಸಬೇಕು’ ಎಂದರು.
ಆಚಾರ್ಯ ಗುರು ಪರಂಪರಾ ಶಾಲೆಯ ಮುಖ್ಯಸ್ಥರಾದ ಶ್ರೀ. ರಂಗಾಚಾರ್ಯ ಇವರು ಮಾತನಾಡಿ, `ಎಲ್ಲ ಪ್ರಾಚೀನ ದೇವಸ್ಥಾನಗಳಿಗೂ ಪುರಾಣದ ಇತಿಹಾಸವಿದೆ. ನಮಗೆ ಈ ಇತಿಹಾಸದ ಮತ್ತು ಧಾರ್ಮಿಕ ಶಿಕ್ಷಣದ ಕೊರತೆ ಇದೆ. ಇದನ್ನು ಅರಿತು ದೇವಸ್ಥಾನಗಳ ಮೂಲಕ ಹಿಂದೂಗಳಿಗೆ ಧಾರ್ಮಿಕ ಶಿಕ್ಷಣ ನೀಡುವುದು ಅವಶ್ಯಕವಾಗಿದೆ’ ಎಂದರು.