ದೇವಸ್ಥಾನಗಳನ್ನು ಭಕ್ತರೇ ನಡೆಸಬೇಕು; ಮಹಾಸಂಘದ ದೇವಸ್ಥಾನ ಸಂಸ್ಕೃತಿ ರಕ್ಷಾ ಕಾರ್ಯವು ಅತಿಶೀಘ್ರದಲ್ಲೇ ಯಶಸ್ಸು ಪಡೆಯಲಿದೆ ! – ಶ್ರೀ ಶ್ರೀ ಪ. ಪೂ. ವಾಮನಾಶ್ರಮ ಮಹಾಸ್ವಾಮೀಜಿಗಳು

ದೀಪ ಪ್ರಜ್ವಲನೆ ಮಾಡುತ್ತಿರುವ (ಎಡದಿಂದ) ಶ್ರೀ ಸಂನ್ಯಾಸ ಶಾಂತಾಶ್ರಮ ಮಠದ ಶ್ರೀ ಶ್ರೀ ಪರಮಪೂಜ್ಯ ವಾಮನಾಶ್ರಮ ಮಹಾಸ್ವಾಮೀಜಿ, ಕಾರವಾರ ಸದಾಶಿವಗಡದ ಶ್ರೀ ದುರ್ಗಾದೇವಿ ದೇವಸ್ಥಾನದ ಶ್ರೀ. ಲಿಂಗರಾಜ್, ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ರಾಜ್ಯ ಸಂಯೋಜಕರಾದ ಶ್ರೀ. ಮೋಹನ್ ಗೌಡ ಮತ್ತು ಗೋಕರ್ಣದ ಸಸ್ಯ ಸಂಜೀವಿನಿ ಆಯುರ್ವೇದ ಆಸ್ಪತ್ರೆಯ ವೈದ್ಯೆರಾದ ಡಾ. ಸೌಮ್ಯಶ್ರೀ ಶರ್ಮಾ !

ಕುಮಟಾದಲ್ಲಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ದೇವಸ್ಥಾನಗಳ ಪರಿಷತ್ತು ಸಂಪನ್ನ !

ಕುಮಟಾ : ಸ್ವಾತಂತ್ರ‍್ಯದ ನಂತರ ನಾವು ಯಾವುದೇ ಭಯವಿಲ್ಲದೇ ಸುಖ ಶಾಂತಿಯಿಂದ ಬಾಳಬಹುದು ಎಂಬ ವಿಚಾರ ಜನತೆಯ ಮನದಲ್ಲಿತ್ತು. ಸದ್ಯದ ಸ್ಥಿತಿ ಆ ರೀತಿ ಇಲ್ಲ. ನಮ್ಮ ದೇವಸ್ಥಾನಗಳ ಸ್ಥಿತಿ ದಯನೀಯವಾಗಿದೆ. ಈಗ ದೇವಸ್ಥಾನದ ಮಹತ್ವವನ್ನು ಎಲ್ಲರಿಗೆ ತಿಳಿಸುವ ಆವಶ್ಯಕತೆಯಿದೆ, ಈ ಕಾರ್ಯ ಸ್ವಾತಂತ್ರ‍್ಯ ಬಂದ ಕೂಡಲೇ ಆಗಬೇಕಿತ್ತು. ಆದರೆ ಈಗಲೂ ಕಾಲ ಮಿಂಚಿಲ್ಲ, ದೇವಸ್ಥಾನಗಳನ್ನು ಭಕ್ತರೇ ನಡೆಸುವಂತಾಗಬೇಕು. ಇಂದಿನಿಂದ ಪ್ರಾರಂಭಿಸಿದರೆ ಮುಂದಿನ ದಿನಗಳಲ್ಲಿ ನಮ್ಮ ಎಲ್ಲಾ ಶ್ರದ್ದಾಸ್ಥಾನಗಳು ಸರಕಾರದ ಹಿಡಿತದಿಂದ ಮುಕ್ತಗೊಳ್ಳಲಿವೆ, ಈ ನಿಟ್ಟಿನಲ್ಲಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಕರ್ನಾಟಕ ದೇವಸ್ಥಾನ ಮಹಾಸಂಘವು ಮಾಡುತ್ತಿರುವ ಕಾರ್ಯ ಶ್ಲಾಘನೀಯ, ಅತೀಶೀಘ್ರದಲ್ಲಿ ಈ ಕಾರ್ಯಕ್ಕೆ ಸಂಪೂರ್ಣ ಜಯ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹಳದೀಪುರ ಶ್ರೀಸಂನ್ಯಾಸ ಶಾಂತಾಶ್ರಮದ ಮಠಾಧಿಪತಿಗಳಾದ ಶ್ರೀ ಶ್ರೀ ಪರಮ ಪೂಜ್ಯ ವಾಮನಾಶ್ರಮ ಮಹಾಸ್ವಾಮೀಜಿಗಳು ಆಶೀರ್ವಾದ ನೀಡಿದರು. ಅವರು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಕುಮಟಾದ ಶ್ರೀ ಮಹಾಲಸಾ ನಾರಾಯಣಿ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಉತ್ತರ ಕನ್ನಡ ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ತಿನಲ್ಲಿ ಆಶೀರ್ವಚನ ನೀಡಿದರು.

ಶ್ರೀ ಶ್ರೀ ಪರಮಪೂಜ್ಯ ವಾಮನಾಶ್ರಮ ಮಹಾಸ್ವಾಮೀಜಿ, ಕಾರವಾರ ಸದಾಶಿವಗಡದ ಶ್ರೀ ದುರ್ಗಾದೇವಿ ದೇವಸ್ಥಾನದ ಶ್ರೀ. ಲಿಂಗರಾಜ್, ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ರಾಜ್ಯ ಸಂಯೋಜಕರಾದ ಶ್ರೀ. ಮೋಹನ್ ಗೌಡ ಮತ್ತು ಗೋಕರ್ಣದ ಸಸ್ಯ ಸಂಜೀವಿನಿ ಆಯುರ್ವೇದ ಆಸ್ಪತ್ರೆಯ ವೈದ್ಯರಾದ ಡಾ. ಸೌಮ್ಯಶ್ರೀ ಶರ್ಮಾ ಇವರು ಈ ಪರಿಷತ್ತಿನ ಉದ್ಘಾಟನೆ ನಡೆಸಿದರು. ಶಂಖನಾದ, ವೇದಮಂತ್ರ ಪಠಣ ಮತ್ತು ಗಣ್ಯರ ಸತ್ಕಾರದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿಯಲ್ಲಿ ಅನ್ಯಮತೀಯರನ್ನು ನೇಮಕ ಮಾಡುವ ವಿಧೇಯಕವನ್ನು ರದ್ದು ಪಡಿಸಿ ! – ಶ್ರೀ. ಮೋಹನ ಗೌಡ

ಕರ್ನಾಟಕ ಸರಕಾರವು 16 ನೇ ವಿಧಾನಸಭೆಯ 3 ನೇ‌ ಅಧಿವೇಶನದಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ, 2024 ಕರ್ನಾಟಕ ರಾಜ್ಯ ಪತ್ರಿಕೆಯನ್ನು ಹೊರಡಿಸಿದ್ದು, ಇದರ 25 ನೇ ಕಲಂದಲ್ಲಿ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಅನ್ಯ ಸಮುದಾಯದವರನ್ನು ನೇಮಕ ಮಾಡುವ ತಿದ್ದುಪಡಿಯನ್ನು ಮಾಡಲಾಗಿದೆ. ಇದು ಅತ್ಯಂತ ಖಂಡನೀಯವಾಗಿದೆ. ಇದು ದೇವಸ್ಥಾನಗಳಲ್ಲಿ ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದವರನ್ನು ಸೇರಿಸಿ ದೇವಸ್ಥಾನಗಳ ಪರಂಪರೆಯನ್ನು ಭಗ್ನ ಮಾಡುವ ಷಡ್ಯಂತ್ರ್ಯವಾಗಿದೆ. ಹಿಂದೂ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗೆ ಅನ್ಯ ಸಮುದಾಯದವರನ್ನು ನೇಮಕ ಮಾಡುವ ಮುಸಲ್ಮಾನರ ಪರವಾಗಿರುವ ರಾಜ್ಯ ಸರಕಾರವು ಹಿಂದೂಗಳನ್ನು ವಕ್ಫ್ ಬೋರ್ಡಗೆ ನೇಮಕ ಮಾಡಬಹುದೇ ? ಆದ್ದರಿಂದ ಕೂಡಲೇ ರಾಜ್ಯ ಸರಕಾರವು ಈ ತಿದ್ದುಪಡಿಯನ್ನು ರದ್ದು ಮಾಡಬೇಕು ಇಲ್ಲದಿದ್ದರೆ ರಾಜ್ಯವ್ಯಾಪಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಗೋಕರ್ಣ ಸಸ್ಯ ಸಂಜೀವಿನಿ ಆಯುರ್ವೇದ ಆಸ್ಪತ್ರೆಯ ಡಾ. ಸೌಮ್ಯಶ್ರೀ ಶರ್ಮಾ ಮಾತನಾಡಿ ನಮ್ಮ ಶರೀರದ ಆರೋಗ್ಯ ಕಾಪಾಡಿಕೊಳ್ಳಲು ದೇವಸ್ಥಾನಗಳು ಪ್ರಮುಖ ಪಾತ್ರ ವಹಿಸುತ್ತವೆ, ದೇವಸ್ಥಾನಗಳು ಸಿದ್ಧಿ ಕ್ಷೇತ್ರಗಳಾಗಿದ್ದು ಆಯುರ್ವೇದದಲ್ಲಿ ದೇವಸ್ಥಾನಗಳಿಗೆ ಹೋಗುವುದನ್ನು ‘ದೈವ ವ್ಯಾಪಾಶಯ ಚಿಕಿತ್ಸೆ’ ಎನ್ನುತ್ತಾರೆ. ಇದೂ ಸಹ ರೋಗದಿಂದ ಹೊರಗೆ ಬರಲು ಒಂದು ಉಪಚಾರ ಪದ್ಧತಿಯೇ ಆಗಿದೆ. ಆದ್ದರಿಂದ ದೇವಸ್ಥಾನಗಳ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಹೇಳಿದರು.

ನಂತರ ಚಂದಾವರ ಸೀಮೆಯ ಹನುಮಂತ ದೇವಸ್ಥಾನದ ವಿಶ್ವಸ್ಥರಾದ ಶ್ರೀ. ಆನಂದ ನಾಯಕ್ ಇವರು ದೇವಸ್ಥಾನಗಳ ಜೀರ್ಣೋದ್ಧಾರದ ಕುರಿತು, ಮಹಾಲಸಾ ನಾರಾಯಣಿ ದೇವಸ್ಥಾನದ ವಿಶ್ವಸ್ಥರಾದ ಶ್ರೀ. ಎಂ. ಬಿ. ಪೈ ಇವರು ದೇವಸ್ಥಾನ ಸಂಸ್ಕೃತಿ ರಕ್ಷಣೆ ಬಗ್ಗೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ದೇವಸ್ಥಾನಗಳನ್ನು ಧರ್ಮಶಿಕ್ಷಣದ ಕೇಂದ್ರಗಳನ್ನಾಗಿ ಮಾಡುವ ಕುರಿತು ಮಾರ್ಗದರ್ಶನ ಮಾಡಿದರು.

ಮಧ್ಯಾಹ್ನದ ನಂತರ ವಕೀಲರ ಮೂಲಕ ದೇವಸ್ಥಾನಗಳ ಸಮಸ್ಯೆಗಳಿಗೆ ಕಾನೂನು ಸಲಹೆಗಳ ಬಗ್ಗೆ ಚರ್ಚೆ ನಡೆಯಿತು. ಗುಂಪು ಚರ್ಚೆಯಲ್ಲಿ ಜಿಲ್ಲಾದ್ಯಂತದ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಅಳವಡಿಕೆ, ದೇವಸ್ಥಾನಗಳಲ್ಲಿ ಧರ್ಮಶಿಕ್ಷಣವರ್ಗಗಳ ಪ್ರಾರಂಭ ಮಾಡುವ ಕುರಿತು ಆಯೋಜನೆ ಮಾಡಲಾಯಿತು. ಕೊನೆಯಲ್ಲಿ ದೇವಸ್ಥಾನ ಮಹಾಸಂಘದಿಂದ ತಯಾರಿಸಿದ ಠರಾವಿಗೆ ಎಲ್ಲ ದೇವಸ್ಥಾನ ವಿಶ್ವಸ್ಥರು ಸಮ್ಮತಿ ಸೂಚಿಸಿದರು. ರಾಜ್ಯ ಸರಕಾರಕ್ಕೆ ಕಳಿಸುವ ಈ ಠರಾವಿನ ಪ್ರತಿಯನ್ನು ಜೊತೆಗೆ ಲಗುತ್ತಿಸಲಾಗಿದೆ.