ಫೆಬ್ರವರಿ ೧೬ ರಂದು ರಥ ಸಪ್ತಮಿ ಇದೆ. ಆ ನಿಮಿತ್ತ…

ಸೂರ್ಯದೇವರ ಮಹಾತ್ಮೆ

‘ರಥ ಸಪ್ತಮಿ’ : ಈ ದಿನದಂದು ಎಲ್ಲೆಡೆ ಭಕ್ತಿಭಾವದಿಂದ ಸೂರ್ಯನ ಪೂಜೆ ಮಾಡಲಾಗುತ್ತದೆ. ಭಾರತದಾದ್ಯಂತ ಮಾಘ ಶುಕ್ಲ ಸಪ್ತಮಿಯನ್ನು ‘ರಥಸಪ್ತಮಿ’ ಎಂದು ಪರಿಗಣಿಸಲಾಗುತ್ತದೆ ಮತ್ತು ಈ ದಿನ ಸೂರ್ಯದೇವರ ಪೂಜೆಯನ್ನು ಎಲ್ಲೆಡೆ ಶ್ರದ್ಧಾಭಕ್ತಿಯಿಂದ ಮಾಡಲಾಗುತ್ತದೆ. ಭೂಮಿಯ ಮೇಲಿನ ಎಲ್ಲಾ ಪ್ರಾಣಿಗಳು ಜೀವನಕ್ಕಾಗಿ ಸೂರ್ಯಪ್ರಕಾಶವನ್ನು ಅವಲಂಬಿಸಿರುವುದರಿಂದ, ಪ್ರಾಚೀನ ಕಾಲದ ಜನರು ಸೂರ್ಯನನ್ನು ದೇವರೆಂದು ಪರಿಗಣಿಸಿದರು. ಪ್ರಾಚೀನ ಕಾಲದಿಂದಲೂ ಈ ಸೂರ್ಯನ ಆರಾಧನೆಯು ನಡೆದುಕೊಂಡು ಬಂದಿದೆ. ಋಗ್ವೇದದಲ್ಲಿ ಸೂರ್ಯದೇವರಿಗೆ ಅನೇಕ ಪ್ರಾರ್ಥನೆಗಳಿವೆ. ‘ಆಕಾಶ ಎಂದರೆ ಅದಿತಿ ಮತ್ತು ಅವನ ಮಗ ಸೂರ್ಯ ಎಂದರೆ ಆದಿತ್ಯ, ಅವನು ನಮ್ಮನ್ನು ಪಾಪದಿಂದ ಮುಕ್ತಗೊಳಿಸಲಿ’ ಎಂಬ ಪ್ರಾರ್ಥನೆಗಳು ವಿವಿಧ ಗ್ರಂಥಗಳಲ್ಲಿ ಕಂಡುಬರುತ್ತವೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವ ಪದ್ಧತಿ ನಮ್ಮಲ್ಲಿದೆ. ಉಪನಯನದ ಸಮಯದಲ್ಲಿ, ವಟುವನ್ನು ಸೂರ್ಯನ ವಿದ್ಯಾರ್ಥಿ ಎಂದು ಪರಿಗಣಿಸಲಾಗುತ್ತದೆ. ಯುಧಿಷ್ಠಿರನು ಅಕ್ಷಯಪಾತ್ರೆಯನ್ನು ಸೂರ್ಯನಿಂದ ಪಡೆದನು. ಇದರಿಂದ ಆರ್ಯಾವರ್ತದಲ್ಲಿ ಮೊದಲಿನಿಂದಲೂ ಸೂರ್ಯಾರಾಧನೆಯ ಸಂಪ್ರದಾಯವಿತ್ತು ಎಂಬುದು ತಿಳಿಯುತ್ತದೆ. ಮುಲ್ತಾನ್‌ (ಪಾಕಿಸ್ತಾನ) ನಲ್ಲಿರುವ ಪ್ರಸಿದ್ಧ ಸೂರ್ಯ ದೇವಾಲಯವು ೧೭ ನೇ ಶತಮಾನದಲ್ಲಿ ಮತಾಂಧ ಔರಂಗಜೇಬನಿಂದ ನಾಶವಾಯಿತು.

ಹಿಂದುಸ್ಥಾನದಲ್ಲಿ, ಈ ತಿಥಿಯನ್ನು ವಿವಿಧೆಡೆ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಇದು ಮನ್ವಂತರದ ಮೊದಲ ದಿನವಿದ್ದು ಈ ದಿನ ಸೂರ್ಯ ನಾರಾಯಣನು ೭ ಕುದುರೆ ಗಳೊಂದಿಗೆ ಹೊಸ ರಥದಲ್ಲಿ ಸಾಗುತ್ತಿರುತ್ತಾನೆ.’
(ಕೃಪೆ : ‘ದಿನವಿಶೇಷ’ ಜಾಲತಾಣ)