ಡೆಹರಾಡೂನ್ (ಉತ್ತರಾಖಂಡ) – ಐತಿಹಾಸಿಕ ಸಮಾನ ನಾಗರಿಕ ಮಸೂದೆಯನ್ನು ಫೆಬ್ರವರಿ 6 ರಂದು ಉತ್ತರಾಖಂಡ ವಿಧಾನಸಭೆಯಲ್ಲಿ ಮಂಡಿಸಲಾಯಿತು. ಈ ಕುರಿತು ಸದನದಲ್ಲಿ ಚರ್ಚೆ ಆರಂಭವಾಗಿದೆ. ಕಾಂಗ್ರೆಸ್ ಈ ವಿಧೇಯಕಕ್ಕೆ ವಿರೋಧವನ್ನು ವ್ಯಕ್ತಪಡಿಸಿದೆ. ಭಾಜಪಕ್ಕೆ ಬಹುಮತವಿರುವುದರಿಂದ ಈ ಮಸೂದೆ ಅಂಗೀಕಾರವಾಗಲಿದೆ. ಇದರಿಂದ ಸ್ವಾತಂತ್ರ್ಯದ ನಂತರ ಸಮಾನ ನಾಗರಿಕ ಕಾಯಿದೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಉತ್ತರಾಖಂಡವಾಗಲಿದೆ. ಗೋವಾದ ಪೋರ್ಚುಗೀಸರ ಕಾಲದಿಂದಲೂ ಸಮಾನ ನಾಗರಿಕ ಕಾನೂನು ಜಾರಿಯಲ್ಲಿದೆ.
विधानसभा में ऐतिहासिक “समान नागरिक संहिता विधेयक” पेश किया। #UCCInUttarakhand pic.twitter.com/uJS1abmeo7
— Pushkar Singh Dhami (@pushkardhami) February 6, 2024
ವಿಧೇಯಕದಲ್ಲಿ ಏನಿದೆ ?
ಮದುವೆಯ ವಯಸ್ಸು 18 ಮತ್ತು 21 ವರ್ಷಗಳು !
ಹುಡುಗರ ಮದುವೆಯ ವಯಸ್ಸು ಕನಿಷ್ಠ 21 ವರ್ಷ ಮತ್ತು ಹುಡುಗಿಯರಿಗೆ 18 ವರ್ಷ ಇಡಲಾಗಿದೆ. ಅವರ ಮದುವೆಯ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ. ನೊಂದಾಯಿಸದ ವಿವಾಹಗಳಿಗೆ ಮಾನ್ಯತೆ ನೀಡಲಾಗುವುದಿಲ್ಲ. ಮದುವೆ ನೋಂದಣಿಯನ್ನು ಸುಲಭಗೊಳಿಸಲಾಗಿದೆ. ಇದು ಹಿಂದೂಗಳು ಮತ್ತು ಮುಸ್ಲಿಮರು ಸೇರಿದಂತೆ ಎಲ್ಲಾ ಧರ್ಮದವರಿಗೆ ಅನ್ವಯಿಸುತ್ತದೆ. ಒಮ್ಮೆ ಮದುವೆಯಾದ ನಂತರ, ಮೊದಲ ಮದುವೆ ಅಸಿಂಧು ಎಂದು ಘೋಷಿಸುವವರೆಗೆ ಹುಡುಗ ಅಥವಾ ಹುಡುಗಿ ಮತ್ತೆ ಮದುವೆಯಾಗಲು ಸಾಧ್ಯವಾಗುವುದಿಲ್ಲ.
ಮದುವೆಯಾದ ಒಂದು ವರ್ಷದ ನಂತರ ವಿಚ್ಛೇದನಕ್ಕೆ ಅವಕಾಶ !
ಯಾವುದೇ ಹುಡುಗ ಅಥವಾ ಹುಡುಗಿ ಮದುವೆಯಾದ ತಕ್ಷಣ ವಿಚ್ಛೇದನಕ್ಕೆ ಪ್ರಯತ್ನಿಸಲು ಸಾಧ್ಯವಾಗುವುದಿಲ್ಲ. ಮದುವೆಯ ಒಂದು ವರ್ಷ ಪೂರ್ಣಗೊಂಡ ನಂತರ, ದಂಪತಿಗಳು ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಬಹುದು. ಮುಸ್ಲಿಮರಲ್ಲಿ ತ್ರಿವಳಿ ತಲಾಖ್ ಪದ್ಧತಿ ಕೊನೆಗೊಳ್ಳುವುದು. ಕಾನೂನುಬದ್ಧ ವಿಚ್ಛೇದನಕ್ಕಾಗಿ, ಎಲ್ಲಾ ಹಿಂದೂಗಳು ಮತ್ತು ಮುಸ್ಲಿಮರು ಒಂದೇ ಪ್ರಕ್ರಿಯೆಯ ಮೂಲಕ ಹೋಗಬೇಕಾಗುತ್ತದೆ. ಈಗಾಗಲೇ ವಿವಾಹವಾದ ವ್ಯಕ್ತಿಗೆ ವಿಚ್ಛೇದನವಿಲ್ಲದೆ ಮರುಮದುವೆಯಾಗಲು ಅವಕಾಶವಿರುವುದಿಲ್ಲ. ಯಾರಾದರೂ ಇದನ್ನು ಉಲ್ಲಂಘಿಸಿ ಮದುವೆಯಾದರೆ, ಅವರಿಗೆ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ದತ್ತು ಪಡೆದ ಮಕ್ಕಳಿಗೂ ಆಸ್ತಿಯಲ್ಲಿ ಸಮಾನ ಹಕ್ಕು ಸಿಗುವುದು !
ಮುಸ್ಲಿಂ ಮಹಿಳೆಯರು ಈಗ ಮಕ್ಕಳನ್ನು ದತ್ತು ತೆಗೆದುಕೊಳ್ಳಬಹುದು. ದತ್ತು ಪಡೆದ ಮಗುವಿಗೆ ಆಸ್ತಿಯಲ್ಲಿ ಸಮಾನ ಹಕ್ಕುಗಳಿವೆ. ಪೋಷಕರು ಜೈವಿಕ ಮಕ್ಕಳು ಮತ್ತು ಕಾನೂನುಬದ್ಧವಾಗಿ ದತ್ತು ಪಡೆದ ಮಕ್ಕಳ ನಡುವೆ ವ್ಯತ್ಯಾಸವನ್ನು ಮಾಡಲು ಸಾಧ್ಯವಿಲ್ಲ. ಪಿತ್ರಾರ್ಜಿತ ಸಂಪತ್ತಿನಲ್ಲಿಯೂ ಹೆಣ್ಣು ಮಕ್ಕಳಿಗೆ ಹಕ್ಕಿದೆ. ಒಬ್ಬಳೇ ಒಬ್ಬ ಹುಡುಗಿಯ ವಿವಾಹದ ಬಳಿಕ ಮರಣ ಹೊಂದಿದರೆ ಅವಳ ಅವರ ಪೋಷಕರನ್ನು ನೋಡಿಕೊಳ್ಳುವ ಜವಾಬ್ದಾರಿ ಹುಡುಗಿಯ ಪತಿಯ ಮೇಲಿರುತ್ತದೆ.
ಲಿವ್ ಇನ್ ರಿಲೇಶನನಲ್ಲಿ ಇರುವವರು ಮಾಹಿತಿ ನೀಡಬೇಕು !
ಲಿವ್-ಇನ್ ರಿಲೇಶನಶಿಪ್ ನಲ್ಲಿ (ವಿವಾಹವನ್ನು ಮಾಡಿಕೊಳ್ಳದೇ ಒಟ್ಟಿಗೆ ಇರುವುದು) ವಾಸಿಸುವವರು ತಮ್ಮ ಸಂಪೂರ್ಣ ಮಾಹಿತಿಯನ್ನು ನೀಡಬೇಕಾಗುತ್ತದೆ. ಲೀವ್-ಇನ್ ಜೋಡಿಗಳು ತಮ್ಮ ಪೋಷಕರಿಂದ ಒಪ್ಪಿಗೆ ಪ್ರಮಾಣಪತ್ರವನ್ನು ಪಡೆದುಕೊಳ್ಳುವುದು ಆವಶ್ಯಕವಿದೆ. ತದ ನಂತರ ಈ ಸಂದರ್ಭದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಸೂಕ್ತ ಮಾಹಿತಿ ನೀಡಬೇಕಾಗುತ್ತದೆ. ಅಂತಹ ಮಾಹಿತಿ ನೀಡದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಲೀವ್-ಇನ್ ಜೋಡಿಗಳಿಗೆ ಮಕ್ಕಳಿದ್ದರೆ, ಅವರಿಗೂ ಅವರ ಪೋಷಕರ ಆಸ್ತಿಯಲ್ಲಿ ಸಂಪೂರ್ಣ ಹಕ್ಕುಗಳನ್ನು ಹೊಂದಿರುತ್ತಾರೆ. ಈ ಕಾರಣದಿಂದಾಗಿ, ‘ಲಿವ್-ಇನ್’ ಜೋಡಿ ಪರಸ್ಪರ ಮೋಸ ಮಾಡಲು ಸಾಧ್ಯವಾಗುವುದಿಲ್ಲ.