Budget 2024 : ತೆರಿಗೆ ರಚನೆಯಲ್ಲಿ ಯಾವುದೇ ಬದಲಾವಣೆ ಇಲ್ಲ !

  • ಮಧ್ಯಂತರ ಬಜೆಟ್ ಮಂಡನೆ !

  • 40 ಸಾವಿರ ಸಾಮಾನ್ಯ ರೈಲ್ವೇ ಕೋಚ್‌ಗಳು ‘ವಂದೇ ಭಾರತ್’ನಂತೆ ಆಗಲಿದೆ !

  • ಲಕ್ಷದ್ವೀಪದಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗುವುದು

  • 3 ಹೊಸ ರೈಲು ಮಾರ್ಗಗಳನ್ನು ಆರಂಭಿಸಲಾಗುವುದು

  • 3 ಕೋಟಿ ಮಹಿಳೆಯರನ್ನು ‘ಲಖಪತಿ ದೀದಿ’ ಮಾಡುತ್ತೇವೆ

ನವ ದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರು ಲೋಕಸಭೆಯಲ್ಲಿ 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಿದರು. ಈ ಬಜೆಟ್‌ನಲ್ಲಿ ತೆರಿಗೆ ರಚನೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹಾಗಾಗಿ ಮಧ್ಯಮವರ್ಗದವರಿಗೆ ಇದರಿಂದ ವಿಶೇಷ ಲಾಭವೇನೂ ಆಗಿಲ್ಲ ಎಂಬುದು ಕಂಡು ಬರುತ್ತಿದೆ. ಬರುವ ಜುಲೈನಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುವುದು. ಅದರಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಯೋಜನೆಯನ್ನು ಮಂಡಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು.

ಹಣಕಾಸು ಸಚಿವ ಸೀತಾರಾಮನ್ ಇವರು ಬಜೆಟ್ ಮಂಡಿಸುವಾಗ,

1. ಮಧ್ಯಂತರ ಬಜೆಟ್‌ನಲ್ಲಿ 4 ಕ್ಷೇತ್ರಗಳಿಗೆ ಒತ್ತು ನೀಡಲಾಗಿದೆ. ಬಡವರು, ಮಹಿಳೆಯರು, ಯುವಕರು ಮತ್ತು ಅನ್ನದಾತರು. ಇದರಲ್ಲಿ ಸರಕಾರ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿತು. ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಒಟ್ಟು 34 ಲಕ್ಷ ಕೋಟಿ ರೂಪಾಯಿಗಳನ್ನು ಖಾತೆಗಳಿಗೆ ಕಳುಹಿಸಲಾಗಿದೆ. ಅಂದಾಜಿನ ಪ್ರಕಾರ 1 ಕೋಟಿ ಮಹಿಳೆಯರು ಲಖಪತಿ ಆಗಿದ್ದಾರೆ. ಇದೀಗ 3 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡುವ ಗುರಿಯನ್ನು ‘ಲಖಪತಿ ದೀದಿ’ ಹಾಕಿಕೊಳ್ಳಲಾಗಿದೆ. ಯುವಕರಿಗಾಗಿ 3 ಸಾವಿರ ಹೊಸ ಐಐಟಿಗಳನ್ನು ತೆರೆಯಲಾಗಿದೆ. 54 ಲಕ್ಷ ಯುವಕರಿಗೆ ತರಬೇತಿ ನೀಡಲಾಗಿದೆ. ಅನ್ನದಾತರಿಗೆ (ರೈತರಿಗೆ) ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಮೂಲಕ 11 ಕೋಟಿ 8 ಲಕ್ಷ ಜನರು ಆರ್ಥಿಕ ನೆರವು ಪಡೆದಿದ್ದಾರೆ.

2. 7 ಲಕ್ಷದವರೆಗೆ ಆದಾಯ ಇರುವವರಿಗೆ ತೆರಿಗೆ ವಿಧಿಸದ ಕಾರಣ ಆದಾಯ ತೆರಿಗೆ ಪಾವತಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಮರುಪಾವತಿಯನ್ನು ಸಹ ತಕ್ಷಣವೇ ನೀಡಲಾಗುತ್ತದೆ. ಸರಕು ಮತ್ತು ತೆರಿಗೆ (ಜಿಎಸ್‌ಟಿ) ಸಂಗ್ರಹ ದ್ವಿಗುಣಗೊಂಡಿದೆ. ಜಿಎಸ್‌ಟಿ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಬದಲಾಯಿಸಿದೆ.

3. ವಿತ್ತೀಯ ಕೊರತೆಯು ಶೇಕಡಾ 5.1 ಎಂದು ಅಂದಾಜಿಸಲಾಗಿದೆ. ವೆಚ್ಚ 44 ಲಕ್ಷ ಕೋಟಿ 90 ಸಾವಿರ ಕೋಟಿ ಆಗಿದ್ದೂ ಅಂದಾಜು ಆದಾಯ 30 ಲಕ್ಷ ಕೋಟಿ ರೂಪಾಯಿ ಆಗಿದೆ. 10 ವರ್ಷಗಳಲ್ಲಿ ಆದಾಯ ತೆರಿಗೆ ಸಂಗ್ರಹವು 3 ಪಟ್ಟು ಹೆಚ್ಚಾಗಿದೆ. ತೆರಿಗೆ ದರ ಕಡಿಮೆ ಮಾಡಿದ್ದೇವೆ. 2025-26ರ ವೇಳೆಗೆ ಕೊರತೆ ಇನ್ನೂ ಕಡಿಮೆಯಾಗಲಿದೆ.

4. ನಾವು ಜೈವಿಕ ಇಂಧನಕ್ಕಾಗಿ ಮೀಸಲಾದ ಯೋಜನೆಗಳನ್ನು ಪರಿಚಯಿಸಿದ್ದೇವೆ. ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೆ ವೇಗ ನೀಡಲಾಗುವುದು ಮತ್ತು ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ವೇಗಗೊಂಡಿದೆ. ರಾಜ್ಯಗಳಿಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ 70 ಪ್ರತಿಶತ ಮನೆಗಳನ್ನು ಮಹಿಳೆಯರಿಗಾಗಿ ನಿರ್ಮಿಸಲಾಗಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಉತ್ತೇಜನ ದೊರೆಯಲಿದೆ. ಬಡ್ಡಿ ರಹಿತವಾಗಿ 75 ಸಾವಿರ ಕೋಟಿ ರೂಪಾಯಿ ಸಾಲ ನೀಡಲಾಗಿದೆ. 2014ರಿಂದ 2023ರವರೆಗೆ ವಿದೇಶಿ ಹೂಡಿಕೆಯೂ ಹೆಚ್ಚಿದೆ. 1 ಕೋಟಿ 47 ಲಕ್ಷ ಯುವಕರಿಗೆ ‘ಸ್ಕಿಲ್ ಇಂಡಿಯಾ’ದಲ್ಲಿ ತರಬೇತಿ ನೀಡಲಾಗಿದೆ. ಮೀನು ಉತ್ಪಾದನೆ ದ್ವಿಗುಣಗೊಂಡಿದೆ. ಕಳೆದ 4 ವರ್ಷಗಳಲ್ಲಿ ಆರ್ಥಿಕ ಅಭಿವೃದ್ಧಿ ವೇಗಗೊಂಡಿದೆ. ಯುವಶಕ್ತಿ ತಂತ್ರಜ್ಞಾನ ಯೋಜನೆಯನ್ನು ರೂಪಿಸಲಿದೆ. ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚಾಗಿದೆ. ವಿಮಾನಯಾನ ಸಂಸ್ಥೆಗಳು 1 ಸಾವಿರ ವಿಮಾನಗಳ ಬೇಡಿಕೆಯೊಂದಿಗೆ ಮುಂದುವರಿಯುತ್ತಿವೆ.

ಅಗ್ಗದ ಮತ್ತು ದುಬಾರಿ ಏನೂ ಇಲ್ಲ!

ಈ ಮಧ್ಯಂತರ ಬಜೆಟ್‌ನಲ್ಲಿ ಯಾವುದನ್ನೂ ಅಗ್ಗ ಅಥವಾ ದುಬಾರಿಯಾಗಿಸಲಾಗಿಲ್ಲ. ಇದರ ಹಿಂದಿನ ಕಾರಣವೆಂದರೆ 2017 ರ ಜಿಎಸ್‌ಟಿ ಅನುಷ್ಠಾನದ ನಂತರ, ಬಜೆಟ್ ಕಸ್ಟಮ್ಸ್ ಮತ್ತು ಅಬಕಾರಿ ಸುಂಕಗಳನ್ನು ಮಾತ್ರ ಹೆಚ್ಚಿಸಿತು ಅಥವಾ ಕಡಿಮೆಗೊಳಿಸಿತು, ಇದು ಕೆಲವೇ ವಸ್ತುಗಳ ಮೇಲೆ ಪರಿಣಾಮ ಬೀರುತ್ತದೆ.

ರಕ್ಷಣೆಗಾಗಿ 11 ಸಾವಿರ ಕೋಟಿ ರೂಪಾಯಿ ಮೀಸಲು

ಮಧ್ಯಂತರ ಬಜೆಟ್‌ನಲ್ಲಿ ರಕ್ಷಣೆಗೆ 11 ಲಕ್ಷದ 11 ಸಾವಿರದ 111 ಕೋಟಿ ಮೀಸಲಿಡಲಾಗಿದೆ. ಈ ಮೊತ್ತ ಕಳೆದ ವರ್ಷಕ್ಕಿಂತ ಶೇ 11ರಷ್ಟು ಹೆಚ್ಚು ಆಗಿದೆ. ದೇಶದ ಒಟ್ಟು ರಾಷ್ಟ್ರೀಯ ಆದಾಯದ (ಜಿಡಿಪಿ) ಶೇಕಡಾ 3.4 ರಷ್ಟನ್ನು ರಕ್ಷಣಾ ಖಾತೆ ಹೊಂದಿದೆ. ಕಳೆದ ವರ್ಷ ಇದು ಕೇವಲ ಶೇ.1.9ರಷ್ಟಿತ್ತು.

1 ಕೋಟಿ ಕುಟುಂಬಗಳನ್ನು ಮೇಲ್ಛಾವಣಿ ಸೌರ ವಿದ್ಯುತ್ ಉತ್ಪಾದನೆಗೆ ತರುವುದು

1 ಕೋಟಿ ಕುಟುಂಬಗಳನ್ನು ರೂಫ್ ಟಾಪ್ ಸೌರಶಕ್ತಿ ಯೋಜನೆಯಡಿ ತರಲಾಗುವುದು ಎಂದು ಹಣಕಾಸು ಸಚಿವೆ ಸೀತಾರಾಮನ್ ಹೇಳಿದ್ದಾರೆ. ಇದರಿಂದ 1 ಕೋಟಿ ಕುಟುಂಬಗಳು ತಿಂಗಳಿಗೆ 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಲು ಸಾಧ್ಯವಾಗುತ್ತದೆ. ಈ ಮೂಲಕ ಉಚಿತ ಸೌರಶಕ್ತಿ ಪಡೆಯುವುದರೊಂದಿಗೆ ಹೆಚ್ಚುವರಿ ವಿದ್ಯುತ್ ಅನ್ನು ವಿತರಣಾ ಸಂಸ್ಥೆಗಳಿಗೆ ಮಾರಾಟ ಮಾಡುವ ಮೂಲಕ ಕುಟುಂಬಗಳು ವರ್ಷಕ್ಕೆ 15 ರಿಂದ 18 ಸಾವಿರ ರೂಪಾಯಿಗಳನ್ನು ಉಳಿಸಲು ಸಾಧ್ಯವಾಗುತ್ತದೆ.

ಬಜೆಟ್‌ನ ಕೆಲವು ನಿಬಂಧನೆಗಳು

ಅ. ಲಕ್ಷದ್ವೀಪದಲ್ಲಿ ಹೊಸ ಯೋಜನೆಗಳನ್ನು ಆರಂಭಿಸಲಾಗುವುದು

ಆ. 11 ರಷ್ಟು ಹೆಚ್ಚು ಮೂಲಸೌಕರ್ಯಕ್ಕೆ ಖರ್ಚು ಮಾಡಲಾಗುವುದು

ಇ. ಜನಸಂಖ್ಯೆಯ ಬೆಳವಣಿಗೆಗೆ ಸಮಿತಿಯನ್ನು ರಚಿಸಲಾಗಿದೆ

ಈ. ಎಲ್ಲರಿಗೂ ಶಾಶ್ವತ ಮನೆ ನೀಡಲಾಗುವುದು

ಉ. ಪ್ರಧಾನ ಮಂತ್ರಿ ಮತ್ಸ್ಯ ಸಂಪದಾ ಯೋಜನೆ ವಿಸ್ತರಿಸಲಾಗುವುದು

ಊ. 3 ಹೊಸ ರೈಲು ಮಾರ್ಗಗಳನ್ನು ಆರಂಭಿಸಲಾಗುವುದು

ಎ. ಪ್ಯಾಸೆಂಜರ್ ರೈಲುಗಳ ಕಾರ್ಯನಿರ್ವಹಣೆಯನ್ನು ಸುಧಾರಿಸಲಾಗುವುದು

ಐ. ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆ ಅಡಿಯಲ್ಲಿ ಕಾಮಗಾರಿಗಳನ್ನು ವೇಗಗೊಳಿಸಲಾಗುವುದು

ಓ. ಸರಕು ಸಾಗಣೆ ಯೋಜನೆಯನ್ನೂ ಅಭಿವೃದ್ಧಿಪಡಿಸಲಾಗುವುದು

ಅಂ 40 ಸಾವಿರ ಸಾಮಾನ್ಯ ರೈಲ್ವೇ ಬೋಗಿಗಳನ್ನು ‘ವಂದೇ ಭಾರತ್’ ಕೋಚ್‌ಗಳಂತೆ ಮಾಡಲಾಗುವುದು

ಆಃ. ಸಾರ್ವಜನಿಕ ಸಾರಿಗೆಗೆ ಇ-ವಾಹನಗಳು ಲಭ್ಯವಾಗಲಿವೆ

ಕ. ರೈಲು-ಸಮುದ್ರ ಸಂಪರ್ಕಕ್ಕೂ ಒತ್ತು ನೀಡಲಾಗುವುದು