ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ ಕುಮಾರ ಅವರು ರಾಷ್ಟ್ರೀಯ ಜನತಾ ದಳ (RJD)ದೊಂದಿಗಿನ ಮೈತ್ರಿಯನ್ನು ಮುರಿದುಕೊಂಡು ಬಿಜೆಪಿಯೊಂದಿಗೆ ಹೊಸ ಮೈತ್ರಿ ಮಾಡಿಕೊಂಡಿದ್ದಾರೆ.

ಹೊಸ ಸರ್ಕಾರದಲ್ಲಿ ನಿತೀಶ ಕುಮಾರ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು!

ಭಾಜಪದಿಂದ ಸಾಮ್ರಾಟ ಚೌಧರಿ ಮತ್ತು ವಿಜಯ ಸಿನ್ಹಾ ಉಪ ಮುಖ್ಯಮಂತ್ರಿಗಳು!

ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ

ಪಾಟಲಿಪುತ್ರ (ಬಿಹಾರ) – ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ ಅವರ ಜನತಾ ದಳ (ಸಂಯುಕ್ತ) ಪಕ್ಷವು ಲಾಲು ಪ್ರಸಾದ ಯಾದವ ಅವರ ರಾಷ್ಟ್ರೀಯ ಜನತಾ ದಳ ಪಕ್ಷದ ಮೈತ್ರಿಯನ್ನು ಮುರಿದುಕೊಂಡು ಸರಕಾರವನ್ನು ವಿಸರ್ಜಿಸಿದರು. ಆ ಬಳಿಕ ಭಾಜಪದೊಂದಿಗೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ ಇವರು ನಿತೀಶ ಕುಮಾರ ಸೇರಿದಂತೆ 9 ಮಂದಿಗೆ ಪ್ರಮಾಣ ವಚನ ಬೋಧಿಸಿದರು. ಭಾಜಪದ ಸಾಮ್ರಾಟ ಚೌಧರಿ ಮತ್ತು ವಿಜಯ ಸಿನ್ಹಾ ಇವರನ್ನು ಉಪಮುಖ್ಯಮಂತ್ರಿಗಳಾಗಿ ಮಾಡಲಾಗಿದೆ. ಇದಕ್ಕಿಂತ ಮೊದಲು ಈ ಹೊಸ ಮೈತ್ರಿಕೂಟದಿಂದ 128 ಶಾಸಕರ ರಾಜೀನಾಮೆ ಪತ್ರಗಳನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿತ್ತು. ಈ ಸರಕಾರಕ್ಕೆ ಕೆಲವು ಪಕ್ಷೇತರರು ಮತ್ತು ಎಚ್.ಎ.ಎಂ. ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ.

ರಾಜೀನಾಮೆ ಸಲ್ಲಿಸಿದ ನಂತರ, ಮುಖ್ಯಮಂತ್ರಿ ನಿತೀಶ ಕುಮಾರ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, ರಾಷ್ಟ್ರೀಯ ಜನತಾ ದಳದೊಂದಿಗೆ ರಾಜ್ಯದ ಆಡಳಿತವು ಸಮರ್ಪಕವಾಗಿ ನಡೆಯುತ್ತಿರಲಿಲ್ಲ, ಆದ್ದರಿಂದ ನನಗೆ ರಾಜೀನಾಮೆ ನೀಡುವ ಸಮಯ ಬಂದಿತು ಎಂದು ತಿಳಿಸಿದರು. ಪತ್ರಕರ್ತರಾದ ನೀವು ಈ ಹಿಂದೆ ಹಲವು ಬಾರಿ ಕೇಳಿದ್ದೀರಿ; ಆದರೆ ಆಗ ನಾನು ಉತ್ತರ ನೀಡಿರಲಿಲ್ಲ. ನಾವು ಎಲ್ಲಾ ಪರಿಸ್ಥಿತಿಗಳನ್ನು ನೋಡುತ್ತಿದ್ದೆವು.ನಂತರ ಜನರು ನನಗೆ ವಿವಿಧ ಸಲಹೆಗಳನ್ನು ನೀಡಲು ಪ್ರಾರಂಭಿಸಿದರು. ನಾನು ನನ್ನ ಸಹೋದ್ಯೋಗಿಯೊಂದಿಗೆ ಚರ್ಚಿಸಿದೆ. ಇದಾದ ನಂತರ ಇಂದು ನಾನು ರಾಜೀನಾಮೆ ನೀಡುವ ಮೂಲಕ ನಮ್ಮ ಸರ್ಕಾರ ವಿಸರ್ಜನೆಗೊಳಿಸಿದೆನು. ನಾವು ಮೊದಲು ಭಾಜಪದೊಂದಿಗೆ ಮೈತ್ರಿ ಮಾಡಿಕೊಂಡಿದ್ದೆವು. ಆ ಮೈತ್ರಿಯನ್ನು ಮುರಿದು ಇವರೊಂದಿಗೆ (ರಾಷ್ಟ್ರೀಯ ಜನತಾ ದಳದೊಂದಿಗೆ ಮೈತ್ರಿ ಮಾಡಿಕೊಂಡೆವು. ಆದರೆ ಇಲ್ಲಿಗೆ ಬಂದರೂ ಯಾವುದೇ ಕೆಲಸಗಳು ಸುಗಮವಾಗಿ ನಡೆಯುತ್ತಿರಲಿಲ್ಲ. ನಮ್ಮ ಜನಕ್ಕೆ ತೊಂದರೆ ಆಗುತ್ತಿತ್ತು. ಅವರು ಶ್ರಮ ವಹಿಸುತ್ತಿದ್ದರು. ಆದರೆ ಕೆಲವು ವಿಷಯಗಳ ಬಗ್ಗೆ ಅವರಿಗೆ ಕೆಟ್ಟದೆನಿಸುತ್ತಿತ್ತು. ಆದುದರಿಂದ ನಾನು ಈ ನಿರ್ಣಯದ ವರೆಗೆ ತಲುಪಿದೆನು ಎಂದು ಹೇಳಿದರು.