ಶ್ರೀರಾಮ ಮಂದಿರವು ಭಕ್ತರ ಸಂಖ್ಯೆಯಲ್ಲಿ ವ್ಯಾಟಿಕನ್ ಮತ್ತು ಮೆಕ್ಕಾವನ್ನು ಮೀರಿಸಲಿದೆ !

ಅಯೋಧ್ಯೆ (ಉತ್ತರ ಪ್ರದೇಶ) – ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯಾದ ಬಳಿಕ ಜನವರಿ 23 ರಿಂದ ಮಂದಿರವನ್ನು ಸಾರ್ವಜನಿಕರಿಗೆ ತೆರೆಯಲಾಗಿದೆ. ಇಲ್ಲಿ ಪ್ರತಿದಿನ 1 ಲಕ್ಷ ಭಕ್ತರು ದರ್ಶನಕ್ಕಾಗಿ ಬರುವರೆಂದು ಅಂದಾಜಿಸಲಾಗಿದೆ.ಮುಂದಿನ 6 ತಿಂಗಳಲ್ಲಿ ಈ ಸಂಖ್ಯೆ 2 ಕೋಟಿಯವರೆಗೆ ತಲುಪಲಿದೆ. ಈ ಕಾರಣದಿಂದಾಗಿ, ಅಯೋಧ್ಯೆಯು ಸುವರ್ಣ ಮಂದಿರ ಮತ್ತು ಆಂಧ್ರಪ್ರದೇಶದ ತಿರುಪತಿ ಬಾಲಾಜಿ ದೇವಾಲಯವನ್ನು ಭಕ್ತರ ಸಂಖ್ಯೆಯಲ್ಲಿ ಹಿಂದಿಕ್ಕಬಹುದು. ಪ್ರತಿ ವರ್ಷ ಮೂರೂವರೆ ಕೋಟಿ ಜನರು ಸುವರ್ಣ ಮಂದಿರಕ್ಕೆ ಭೇಟಿ ನೀಡುತ್ತಾರೆ. ಹಾಗೆಯೇ ಮೂರು ಕೋಟಿ ಜನರು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಜಾಗತಿಕ ಮಟ್ಟದಲ್ಲಿ, ವ್ಯಾಟಿಕನ ನಗರಕ್ಕೆ ಪ್ರತಿ ವರ್ಷ ಸುಮಾರು 90 ಲಕ್ಷ ಜನರು ಭೇಟಿ ನೀಡುತ್ತಾರೆ ಮತ್ತು ಸೌದಿ ಅರೇಬಿಯಾದ ಮೆಕ್ಕಾಕ್ಕೆ ಸುಮಾರು 2 ಕೋಟಿ ಜನರು ಹೋಗುತ್ತಾರೆ. ಅಯೋಧ್ಯೆಯು ಮುಂದಿನ ಒಂದು ವರ್ಷದಲ್ಲಿ ವಿಶ್ವದ ಅತಿ ಪ್ರಮುಖ ಧಾರ್ಮಿಕ ಪ್ರವಾಸ ತಾಣಗಳನ್ನು ಹಿಂದಿಕ್ಕಲಿದೆ. ಇದರಿಂದ ಅಯೋಧ್ಯೆಯಲ್ಲಿ ಹೊಸ ಉದ್ಯೋಗಾವಕಾಶಗಳ ನಿರ್ಮಾಣವಾಗಲಿದೆ. ಶ್ರೀರಾಮ ಮಂದಿರ ನಿರ್ಮಾಣದಿಂದಾಗಿ ಅಯೋಧ್ಯೆ ಒಂದು ದೊಡ್ಡ ಆರ್ಥಿಕ ಕೇಂದ್ರವಾಗಲಿದೆ. ಉತ್ತರ ಪ್ರದೇಶ ಸರ್ಕಾರಕ್ಕೆ 2025 ರಲ್ಲಿ ಶ್ರೀ ರಾಮ ಮಂದಿರದ ಮೂಲಕ 25 ಸಾವಿರ ಕೋಟಿ ರೂಪಾಯಿಗಳ ಹೆಚ್ಚುವರಿ ಆದಾಯ ಸಿಗಬಹುದು.