ಬೆಂಗಳೂರು – ರಾಜ್ಯದ ಕಾಂಗ್ರೆಸ್ ಸರಕಾರ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ದರ್ಶನಕ್ಕಾಗಿ ಹೋಗುವ ರಾಜ್ಯದ ಭಕ್ತರಿಗಾಗಿ ಅಯೋಧ್ಯೆಯಲ್ಲಿ ‘ಕರ್ನಾಟಕ ಯಾತ್ರಿ ನಿವಾಸ’ ನಿರ್ಮಿಸುವುದಾಗಿ ಘೋಷಿಸಿದೆ. ಈ ಯಾತ್ರಿ ನಿವಾಸದಲ್ಲಿ ಭಕ್ತರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಇರಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಮುಜರಾಯಿ ಇಲಾಖೆಯು ಉತ್ತರ ಪ್ರದೇಶ ಸರಕಾರಕ್ಕೆ ಪತ್ರವನ್ನು ಬರೆದಿದೆ. ಈ ಯಾತ್ರಿ ನಿವಾಸಕ್ಕಾಗಿ 10 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಿದೆ. ಈ ಯಾತ್ರಿ ನಿವಾಸವನ್ನು ಶರಯೂ ನದಿಯ ಹತ್ತಿರದ 5 ಎಕರೆ ಪ್ರದೇಶದಲ್ಲಿ ನಿರ್ಮಿಸುವುದಾಗಿ ಕರ್ನಾಟಕದ ಧಾರ್ಮಿಕ ದತ್ತಿ ಇಲಾಖೆಯು ತಿಳಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ 2023 ರಲ್ಲಿ ಉತ್ತರ ಪ್ರದೇಶ ಸರಕಾರಕ್ಕೆ ಪತ್ರ ಬರೆದು ಕರ್ನಾಟಕದಿಂದ ಅಯೋಧ್ಯೆಗೆ ಹೋಗುವ ಭಕ್ತರಿಗಾಗಿ ಶರಯೂ ನದಿಯ ಬಳಿ ಯಾತ್ರಿ ನಿವಾಸವನ್ನು ನಿರ್ಮಿಸಲು ಅನುಮತಿ ನೀಡಬೇಕೆಂದು ಕೋರಿದ್ದರು. ಈ ಮೊದಲೂ ಭಾಜಪ ಮುಖಂಡರಾದ ಬಿ.ಎಸ್. ಯಡಿಯೂರಪ್ಪ ಅವರೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಉತ್ತರ ಪ್ರದೇಶ ಸರಕಾರದ ವಸತಿ ನಿರ್ಮಾಣ ಸಂಸ್ಥೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ.