ಪ್ಯಾರಿಸ್ (ಫ್ರಾನ್ಸ್) – ಕಳೆದ 2 ದಿನಗಳಿಂದ, ಮಾನವ ಕಳ್ಳಸಾಗಣೆ ಶಂಕೆಯ ಮೇಲೆ, ಫ್ರಾನ್ಸ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ನಿಕರಾಗುವಾಗೆ ಹೋಗುತ್ತಿದ್ದ ವಿಮಾನವನ್ನು ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ತಡೆಹಿಡಿದಿದೆ. ಈ ಪೈಕಿ 303 ಭಾರತೀಯರನ್ನು ಬಂಧಿಸಲಾಗಿದೆ. ಅವರಲ್ಲಿ 11 ಮಂದಿ ಅಪ್ರಾಪ್ತರಾಗಿದ್ದು, ಅವರ ಪೋಷಕರು ಅವರೊಂದಿಗೆ ಇಲ್ಲ. ಹೆಚ್ಚಿನ ನಾಗರಿಕರು ಪಂಜಾಬ್ ಮತ್ತು ಗುಜರಾತ್ ರಾಜ್ಯಗಳಿಂದ ಬಂದವರು. ಈ ಭಾರತೀಯರು ಅಮೆರಿಕದೊಳಗೆ ನುಸುಳಲು ಹೊರಟಿರುವ ಶಂಕೆ ವ್ಯಕ್ತವಾಗಿದೆ. ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಬಳಿಕ ಅವರ ಬಿಡುಗಡೆ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ವಿದೇಶಿ ಪ್ರಜೆಗಳನ್ನು 4 ದಿನಗಳಿಗಿಂತ ಹೆಚ್ಚು ಕಾಲ ಫ್ರಾನ್ಸ್‌ನಲ್ಲಿ ಬಂಧಿಸಲಾಗುವುದಿಲ್ಲ. ಇದಕ್ಕೆ ನ್ಯಾಯಾಧೀಶರ ಅನುಮತಿ ಅಗತ್ಯವಿರುತ್ತದೆ. ಈ ಸಂಬಂಧ ಫ್ರಾನ್ಸ್‌ನಿಂದ ಭಾರತಕ್ಕೆ ವರದಿ ಕಳುಹಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿಯೇ ಎಲ್ಲಾ ಜನರಿಗೆ ವಸತಿ ಮತ್ತು ಆಹಾರದ ವ್ಯವಸ್ಥೆಯನ್ನು ಫ್ರಾನ್ಸ್ ಮಾಡಿದೆ. ಮಕ್ಕಳ ಶಿಕ್ಷಣಕ್ಕಾಗಿ ಶಿಕ್ಷಕರನ್ನು ನೇಮಿಸಲಾಗಿದೆ. ಭಾರತೀಯ ಅಧಿಕಾರಿಗಳು ಪ್ರತಿದಿನ ಅವರನ್ನು ಭೇಟಿಯಾಗುತ್ತಿದ್ದಾರೆ.