‘ಕಾಶ್ಮೀರದಿಂದ ಭಾರತವು ಕಲಂ 370 ಅನ್ನು ತೆಗೆದುಹಾಕುವುದು ವಿಶ್ವಸಂಸ್ಥೆಯ ಪ್ರಸ್ತಾಪದ ವಿರುದ್ಧವಾಗಿದೆಯಂತೆ !’ – ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಮುನೀರ್‌

  • ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಮುನೀರ್‌ನಿಂದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗೆ ಭಾರತದ ವಿರುದ್ಧ ದೂರು !

  • ಕಾಶ್ಮೀರ ವಿವಾದವನ್ನು ಸ್ಥಳೀಯ ಜನರು ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪ್ರಸ್ತಾವನೆಗಳ ಆಧಾರದ ಮೇಲೆ ಪರಿಹರಿಸಬೇಕು !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದು, ಇತ್ತೀಚೆಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿದ ಅವರು, ಕಾಶ್ಮೀರ ವಿವಾದಕ್ಕೆ ಅಲ್ಲಿನ ಜನರ ಅಭಿಪ್ರಾಯ ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದ ಆಧಾರದ ಮೇಲೆ ಪರಿಹಾರ ಕಂಡುಕೊಂಡಾಗ ಮಾತ್ರ ದಕ್ಷಿಣ ಏಷ್ಯಾದಲ್ಲಿ ಶಾಂತಿ ನೆಲೆಸುತ್ತದೆ ಎಂದರು.

ಜನರಲ್ ಮುನೀರ್ ಇವರು ಗುಟೆರಸ್ ಅವರೊಂದಿಗೆ ಮಾತನಾಡುವಾಗ, ಭಾರತವು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ 370 ನೇ ವಿಧಿಯನ್ನು ತೆಗೆದುಹಾಕುವುದಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ಭಾರತದ ನಿರ್ಧಾರ ಏಕಪಕ್ಷೀಯ ಮತ್ತು ವಿಶ್ವಸಂಸ್ಥೆಯ ನಿರ್ಣಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು. ಇದಕ್ಕೂ ಮೊದಲು, ಜನರಲ್ ಮುನೀರ್ ಅವರು ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಮತ್ತು ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್ ಅವರನ್ನೂ ಭೇಟಿಯಾದರು. ಈ ಬಾರಿಯೂ ಅವರು ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದರು.

ಜನರಲ್ ಮುನೀರ್ ಪ್ಯಾಲೆಸ್ತೀನ್ ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಕದನ ವಿರಾಮವನ್ನು ಶೀಘ್ರವಾಗಿ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ‘ಭಾರತವು ಕಲಂ 370 ಅನ್ನು ತೆಗೆದುಹಾಕಿದೆ ಮತ್ತು ಈಗ ಅದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಹಿಡಿತ ಸಾಧಿಸಬಹುದೇನೋ ?’, ಎಂಬ ಭಯದಿಂದ ಪಾಕಿಸ್ತಾನದ ಸೇನಾ ಮುಖ್ಯಸ್ಥರು ಅಮೇರಿಕಾಗೆ ಮೊರೆ ಹೋಗುತ್ತಿದ್ದಾರೆ ಎಂಬುದನ್ನು ಗಮನಿಸಿ !