ಶ್ರೀ ದತ್ತಜಯಂತಿ (ಡಿಸೆಂಬರ್‌ ೨೬)

ಇದು ಒಂದು ಸಾಂಪ್ರದಾಯಿಕ ಜನ್ಮೋತ್ಸವ. ಮಾರ್ಗಶಿರ ಹುಣ್ಣಿಮೆಯಂದು ಮೃಗಶಿರಾ ನಕ್ಷತ್ರದಲ್ಲಿ ಸಾಯಂಕಾಲ ದತ್ತನ ಜನ್ಮವಾಯಿತು.

ಇತಿಹಾಸ

‘ಹಿಂದಿನ ಕಾಲದಲ್ಲಿ ಪೃಥ್ವಿಯ ಮೇಲೆ ಸ್ಥೂಲ ಮತ್ತು ಸೂಕ್ಷ್ಮರೂಪದಲ್ಲಿ ಅಸುರೀ ಶಕ್ತಿಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದ್ದವು. ಅವರನ್ನು ದೈತ್ಯರೆಂದು ಕರೆಯಲಾಗುತ್ತಿತ್ತು. ದೇವಗಣರು ಆ ಅಸುರೀ ಶಕ್ತಿಗಳನ್ನು ನಾಶಗೊಳಿಸಲು ಮಾಡಿದ ಪ್ರಯತ್ನಗಳೆಲ್ಲ ವಿಫಲವಾದವು. ಆಗ ಬ್ರಹ್ಮದೇವನ ಆಜ್ಞೆಗನುಸಾರ ಬೇರೆ ಬೇರೆ ಕಡೆಗಳಲ್ಲಿ ವಿವಿಧ ರೂಪಗಳಲ್ಲಿ ದತ್ತನು ಅವತಾರ ತಾಳಬೇಕಾಯಿತು. ಅನಂತರ ದೈತ್ಯರು ನಾಶವಾದರು. ಆ ದಿನವನ್ನು ‘ದತ್ತಜಯಂತಿ’ಯೆಂದು ಆಚರಿಸಲಾಗುತ್ತದೆ.

ಮಹತ್ವ

ದತ್ತಜಯಂತಿಯಂದು ಪೃಥ್ವಿಯಲ್ಲಿ ದತ್ತತತ್ತ್ವವು ನಿತ್ಯದ ತುಲನೆಯಲ್ಲಿ ೧೦೦೦ ಪಟ್ಟು ಹೆಚ್ಚು ಕಾರ್ಯ ನಿರತವಾಗಿರುತ್ತದೆ. ಈ ದಿನ ಮನಃಪೂರ್ವಕ
ದತ್ತನ ನಾಮಜಪಾದಿ ಉಪಾಸನೆಯಿಂದ ದತ್ತತತ್ತ್ವದ ಆದಷ್ಟು ಹೆಚ್ಚು ಲಾಭವಾಗಲು ಸಹಾಯವಾಗುತ್ತದೆ.

ಜನ್ಮೋತ್ಸವವನ್ನು ಆಚರಿಸುವುದು

ದತ್ತಜಯಂತಿಯನ್ನು ಆಚರಿಸುವ ಬಗ್ಗೆ ವಿಶಿಷ್ಟ ಶಾಸ್ತ್ರೋಕ್ತ ವಿಧಿಗಳು ಕಂಡು ಬರುವುದಿಲ್ಲ. ಈ ಉತ್ಸವದ ಮೊದಲು ಏಳು ದಿನ ಗುರುಚರಿತ್ರೆಯ ಪಾರಾಯಣದ ಪದ್ಧತಿಯಿದೆ. ಇದಕ್ಕೆ ಗುರುಚರಿತ್ರೆ ಸಪ್ತಾಹ ಎನ್ನುತ್ತಾರೆ. ಭಜನೆ, ಪೂಜೆ ಮತ್ತು ಕೀರ್ತನೆ ಇತ್ಯಾದಿ ಭಕ್ತಿಯ ವಿಧಗಳು ಪ್ರಚಲಿತವಾಗಿವೆ.

(ಆಧಾರ: ಸನಾತನ ನಿರ್ಮಿತ ಗ್ರಂಥ ‘ದತ್ತ’)