ಯಾವಾಗ ಬೇಕಾದರೂ ಮತ್ತು ಎಲ್ಲಿಯಾದರೂ ಕ್ರಮ ತೆಗೆದುಕೊಳ್ಳಲು ಇದು ತುರ್ತುಪರಿಸ್ಥಿತಿಯಲ್ಲ !-ಗುಜರಾತ ಉಚ್ಚನ್ಯಾಯಾಲಯ

ನ್ಯಾಯವಾದಿಗಳ ಮೇಲೆ ನಡೆಸಿದ ದಾಳಿ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಗುಜರಾತ ಉಚ್ಚನ್ಯಾಯಾಲಯದಿಂದ ಛೀಮಾರಿ!

ಕರ್ಣಾವತಿ (ಗುಜರಾತ್) – ಇದೇ ರೀತಿಯ ಕಾರ್ಯಾಚರಣೆ ನಡೆಯುತ್ತಿದ್ದರೆ, ದೇಶದಲ್ಲಿ ಯಾವುದೇ ವ್ಯಕ್ತಿ ಸುರಕ್ಷಿತವಾಗಿರುವುದಿಲ್ಲ. ನೀವೂ ಸುರಕ್ಷಿತವಾಗಿರುವುದಿಲ್ಲ. ನೀವು ಎಲ್ಲಿ ಬೇಕಾದರೂ ಹೋಗಿ ಏನು ಬೇಕಾದರೂ ಮಾಡಲು, ನಾವು 1975-76ರ ತುರ್ತು ಪರಿಸ್ಥಿತಿಯಲ್ಲಿ ಜೀವಿಸುತ್ತಿಲ್ಲ. ಏಕಾಏಕಿ ಏಕೆ ದಾಳಿ ನಡೆಸಲಾಯಿತು? ಎನ್ನುವ ವಿಷಯದಲ್ಲಿ ಅಧಿಕಾರಿಗಳು ಸವಿಸ್ತಾರವಾದ ಉತ್ತರ ನೀಡಬೇಕು, ಇಲ್ಲದಿದ್ದರೆ ಮನೆಗೆ ಹೋಗುವ ದಾರಿ ಮುಕ್ತವಾಗಿದೆ ಎನ್ನುವ ಶಬ್ದಗಳಲ್ಲಿ ಗುಜರಾತ್ ಉಚ್ಚನ್ಯಾಯಾಲಯವು ಆದಾಯ ತೆರಿಗೆ ಇಲಾಖೆಗೆ ಛೀಮಾರಿ ಹಾಕಿದೆ. ಇದರೊಂದಿಗೆ ಆದಾಯ ತೆರಿಗೆ ಇಲಾಖೆಯ ಮಹಾನಿರ್ದೇಶಕರು ಸೇರಿದಂತೆ 8 ಅಧಿಕಾರಿಗಳಿಗೆ ‘ಕಾರಣ ತಿಳಿಸಿರಿ’ ನೋಟಿಸನ್ನು ಜಾರಿ ಮಾಡಿ, ಅವರಿಗೆ ಡಿಸೆಂಬರ್ 18 ರೊಳಗೆ ಉತ್ತರಿಸುವಂತೆ ಸೂಚಿಸಿದೆ. ಆದಾಯ ತೆರಿಗೆ ಇಲಾಖೆಯು ನ್ಯಾಯವಾದಿಗಳೊಬ್ಬರ ಕಚೇರಿ ಮೇಲೆ ದಾಳಿ ನಡೆಸಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡು ಅವರ ಕುಟುಂಬ ಸದಸ್ಯರನ್ನು ವಶಕ್ಕೆ ಪಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯವಾದಿ ಮೌಲಿಕ್ ಶೇಠ್ ಅವರು ಉಚ್ಚನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಉಚ್ಚನ್ಯಾಯಾಲಯವು ಆದಾಯ ತೆರಿಗೆ ಇಲಾಖೆಗೆ ಈ ಕೆಳಗಿನ ಶಬ್ದಗಳಲ್ಲಿ ಹಾಕಿದ ಛೀಮಾರಿ !

1. ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವ ಸಂಬಂಧಿತ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಆದಾಯ ತೆರಿಗೆ ಇಲಾಖೆ ಕಾಯ್ದೆಯಡಿ ಏಕೆ ಕ್ರಮ ಕೈಗೊಂಡಿಲ್ಲ?

2. ಹಠಾತ್ ದಾಳಿ ನಡೆಸಿ ಆದಾಯ ತೆರಿಗೆ ಇಲಾಖೆಯು ಸಂಬಂಧಪಟ್ಟ ನ್ಯಾಯವಾದಿಗಳೊಂದಿಗೆ ನಡೆಸಿದ ವರ್ತನೆಯು ಅತ್ಯಂತ ದುಃಖಕರ, ದುರದೃಷ್ಟಕರ ಮತ್ತು ನೋವಿನಿಂದ ಕೂಡಿದೆ.

3. ನ್ಯಾಯವಾದಿಗಳ ಕಛೇರಿಯಲ್ಲಿ ಅವರ ಗ್ರಾಹಕರ ಪ್ರಮುಖ ಕಾಗದಪತ್ರಗಳು ಇರುವ ಸಾಧ್ಯತೆಯಿದೆ. ಆ ಕಾಗದಪತ್ರಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಹೇಗೆ ಮುಟ್ಟುತ್ತೀರಿ? ಆದಾಯ ತೆರಿಗೆ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳಾಗಿದ್ದಾರೆಯೇ? ಅವರು ನ್ಯಾಯವಾದಿಗಳ ಕಚೇರಿಯಿಂದ ಕಾಗದಪತ್ರಗಳನ್ನು ಹೇಗೆ ವಶಪಡಿಸಿಕೊಳ್ಳಬಹುದು? ನ್ಯಾಯವಾದಿಗಳ ಆದಾಯದ ಮೇಲೆ ಧಕ್ಕೆ ತರಲು ಸಾಧ್ಯವಿಲ್ಲ. ನ್ಯಾಯವಾದಿಗಳು ಏನೇ ಮಾಡಿದರೂ ಅವರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಮಾಡುತ್ತಿದ್ದಾರೆ.

4. ಆದಾಯ ತೆರಿಗೆ ಇಲಾಖೆ ಕ್ರಮವನ್ನು ಕೈಗೊಂಡಿರುವ ಪ್ರಕರಣದಲ್ಲಿ ನ್ಯಾಯವಾದಿಗಳಿಂದ ಆಕ್ಷೇಪವಿಲ್ಲ; ಆದರೆ ಈ ಕ್ರಮ ಕೈಗೊಂಡ ರೀತಿ ತುಂಬಾ ತಪ್ಪಾಗಿತ್ತು. ವಶಪಡಿಸಿಕೊಂಡಿರುವ ಕಾಗದಪತ್ರಗಳನ್ನು ಹಿಂದಿರುಗಿಸಿರಿ ಮತ್ತು ಹಾಗೆಯೇ ನೀವು ಮಾಡಿರುವ ಕೃತ್ಯದ ಬಗ್ಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರೆ ಮಾತ್ರ ನಾವು ನಿಮ್ಮನ್ನು ಬಿಡುಗಡೆ ಮಾಡುತ್ತೇವೆ. ನಿಮ್ಮ ಕೃತ್ಯಗಳನ್ನು ನಾವು ಎಂದಿಗೂ ಅನುಮತಿಸುವುದಿಲ್ಲ. ನಾವು ನಿಮ್ಮ ಕ್ರಿಯೆಯ ಭಾಗವಾಗಲು ಸಾಧ್ಯವಿಲ್ಲ.