ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ವಿವಾಹಿತ ಅಭ್ಯರ್ಥಿಗಳಿಗೆ ಮಂಗಳಸೂತ್ರವನ್ನು ತೆಗೆಸಿದರು !

ಕಿವಿಯೋಲೆಗಳು, ಚಿನ್ನದ ಸರ ಮತ್ತು ಕಾಲುಂಗುರಗಳನ್ನು ತೆಗೆಸಿದರು !

ಹಿಜಾಬ್ ತೊಟ್ಟ ಯುವತಿಯರಿಗೆ ಮಾತ್ರ ವಿನಾಯಿತಿ !

ಬೆಂಗಳೂರು – ನವೆಂಬರ್ 5 ರಂದು ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗೆ ಹಾಜರಾಗಿದ್ದ ವಿವಾಹಿತ ಮಹಿಳೆಯರಿಗೆ ಪರೀಕ್ಷಾ ಕೊಣೆಗೆ ಪ್ರವೇಶಿಸುವ ಮೊದಲು ತಮ್ಮ ಮಂಗಳಸೂತ್ರಗಳನ್ನು ತೆಗೆಯುವಂತೆ ಹೇಳಲಾಯಿತು. ಇದಲ್ಲದೇ ಕಿವಿಯೋಲೆ, ಚಿನ್ನದ ಸರ, ಕಾಲುಂಗುರಗಳನ್ನು ತೆಗೆಯುವಂತೆ ಹೇಳಿದ್ದರು. ಮಂಗಳಸೂತ್ರ ತೆಗೆಯಲು ನಿರಾಕರಿಸಿದ ಮಹಿಳೆಯರಿಗೆ ಪರೀಕ್ಷೆಗೆ ಹಾಜರಾಗಲು ಅಧಿಕಾರಿಗಳು ಅನುಮತಿ ನಿರಾಕರಿಸಿದರು. ಇಷ್ಟೇ ಅಲ್ಲ ಕಿವಿಯ ಆಭರಣಗಳನ್ನು ತೆಗೆಯಲು ಸಾಧ್ಯವಾಗದ ಮಹಿಳೆಯರು ಅಕ್ಕಸಾಲಿಗನ ಬಳಿಗೆ ಹೋಗಿ ತೆಗೆಸಬೇಕಾಯಿತು. ರಾಯಚೂರಿನ ಇಬ್ಬರು ಮಹಿಳೆಯರನ್ನು ಅಧಿಕಾರಿಗಳು ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಿ ಅವರ ಮಂಗಳಸೂತ್ರ ಮತ್ತು ಕಾಲುಂಗುರಗಳನ್ನು ತೆಗೆಯುವಂತೆ ಮಾಡಿದರು, ಆಗ ಮಹಿಳೆಯರು ಸಂಬಂಧಿಕರ ಬಳಿಗೆ ಹೋಗಿ ಆಭರಣಗಳನ್ನು ತೆಗೆದಿಟ್ಟು ಪರೀಕ್ಷಾ ಕೇಂದ್ರಕ್ಕೆ ಬರಬೇಕಾಯಿತು. ಪರೀಕ್ಷೆಯ ಸಮಯದಲ್ಲಿ ನಡೆಯುವ ನಕಲು ತಡೆಯಲು ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಈ ಕುರಿತು ಸುದ್ದಿಗಳು ವಾರ್ತಾ ವಾಹಿನಿಗಳಲ್ಲಿ ಪ್ರಸಾರವಾದ ನಂತರ ಅಧಿಕಾರಿಗಳು ಆಭರಣಗಳನ್ನು ತೆಗೆಯದಂತೆ ಸಂಬಂಧಪಟ್ಟವರಿಗೆ ಆದೇಶಿಸಿದರು.

1. ಪರೀಕ್ಷೆಗೆ ಹಾಜರಾದ ಯುವತಿಯರು, ಹಿಂದೂ ಧರ್ಮದಲ್ಲಿ ಮಂಗಳಸೂತ್ರ ತೆಗೆಯುವುದಿಲ್ಲ. ಅಗತ್ಯವಿದ್ದಾಗ ಮಾತ್ರ ನಾವು ಅದನ್ನು ತೆಗೆದಿಡುತ್ತೇವೆ. ಪರೀಕ್ಷೆಗೆ ಹೋಗಲು ನನಗೆ ಮಂಗಳಸೂತ್ರ ಮತ್ತು ಕಾಲುಂಗುರಗಳನ್ನು ತೆಗೆಯಬೇಕಾಯಿತು. ಅಧಿಕಾರಿಗಳು ಹಿಜಾಬ್ ಧರಿಸಿದ ಯುವತಿಯರಿಗೆ ಪ್ರವೇಶಿಸಲು ಅನುಮತಿ ನೀಡಿದಂತೆಯೇ, ನಮಗೂ ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಲು ಅವಕಾಶ ನೀಡಬೇಕಿತ್ತು ಎಂದು ಹೇಳಿದರು.

2. ಘಟನೆಯ ಒಂದು ದಿನ ಮೊದಲು, ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ನಕಲು ಮಾಡಿದ ಒಬ್ಬ ಅಭ್ಯರ್ಥಿ ಮತ್ತು ಅವನ ಸಹೋದರನನ್ನು ಬಂಧಿಸಲಾಗಿತ್ತು. ಅವರ ಹೆಸರು ತ್ರಿಮೂರ್ತಿ ಮತ್ತು ಅಂಬರೀಶ್ ಆಗಿದೆ. ತ್ರಿಮೂರ್ತಿ ಪರೀಕ್ಷಾ ಕೇಂದ್ರದಲ್ಲಿ ಬ್ಲೂ ಟೂತ್ ಅಳವಡಿಸಿ ಪರೀಕ್ಷೆ ಬರೆಯುತ್ತಿದ್ದರು. ಅವನ ಸಹೋದರ ಅಂಬರೀಶ್ ಅವನಿಗೆ ಪರೀಕ್ಷಾ ಕೇಂದ್ರದ ಹೊರಗಿನಿಂದ ಬ್ಲೂ ಟೂತ್ ಮೂಲಕ ಸಹಾಯ ಮಾಡುತ್ತಿದ್ದನು.

ಈ ನಿಯಮ ಕೇವಲ ಹಿಂದೂಗಳಿಗೆ ಮಾತ್ರವೇ ? – ಭಾಜಪ

ಹಿಜಾಬ್ ಧರಿಸಿದ್ದ ಯುವತಿಯೊಬ್ಬಳಿಗೆ ಪ್ರವೇಶ ನೀಡಲಾಯಿತು. ಹಾಗಾದರೆ ‘ಈ ನಿಯಮ ಹಿಂದೂಗಳಿಗೆ ಮಾತ್ರವೇ ಅನ್ವಯಿಸುತ್ತದೆಯೇ?’ ಎಂದು ಭಾಜಪ ಸಂಸದ ಬಸನಗೌಡ ಯತ್ನಾಳ್ ಪ್ರಶ್ನಿಸಿದ್ದಾರೆ.

ಸಂಪಾದಕೀಯ ನಿಲುವು

ನಕಲು ಮಾಡುವುದನ್ನು ತಡೆಯುವ ಹೆಸರಿನಲ್ಲಿ ಈ ರೀತಿಯ ತುಘಲಕಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಕೊಂಡಾಗ ಇತರರು ಹೀಗೆ ಮಾಡಲು 100 ಸಲ ಯೋಚನೆ ಮಾಡುವರು !