ದೆಹಲಿ ಮತ್ತು ನೆರೆಯ ಪ್ರದೇಶಗಳಲ್ಲಿನ ವಾಯು ಮಾಲಿನ್ಯದಲ್ಲಿ 5 ಪಟ್ಟು ಹೆಚ್ಚಳ !

ನೋಯ್ಡಾದಲ್ಲಿ ವಾಯುವಿನ ಗುಣಮಟ್ಟದ ಸೂಚ್ಯಂಕ 556 ವರೆಗೆ ತಲುಪಿದೆ !

ನವ ದೆಹಲಿ – ದೆಹಲಿ ಮತ್ತು ನೆರೆಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ವಾಯು ಮಾಲಿನ್ಯ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ನವೆಂಬರ್ 4 ರಂದು ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 504, ನೋಯ್ಡಾ 576 ಮತ್ತು ಗುರುಗ್ರಾಮನಲ್ಲಿ 512 ಗಳಷ್ಟು ಇತ್ತು. ಸಾಮಾನ್ಯವಾಗಿ ಈ ಸೂಚ್ಯಂಕವನ್ನು 100 ರವರೆಗೆ ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಅಂದರೆ ದೆಹಲಿ ಮತ್ತು ಅದರ ನೆರೆಯ ಪ್ರದೇಶಗಳಲ್ಲಿ ವಾಯು ಮಾಲಿನ್ಯವು 5 ಪಟ್ಟು ಹೆಚ್ಚಾಗಿದೆ. ಈ ಕುರಿತು ಗುರುಗ್ರಾಮದ ಮೇದಾಂತ ಆಸ್ಪತ್ರೆಯ ಡಾ. ಅರವಿಂದ ಕುಮಾರ ಇವರು, 400 ರಿಂದ 500 ರಷ್ಟಿರುವ ಸೂಚ್ಯಂಕವು 25 ರಿಂದ 30 ಸಿಗರೇಟ್‌ಗಳನ್ನು ಹೊತ್ತಿಸುವುದರಿಂದ ನಿರ್ಮಾಣವಾಗುವಷ್ಟು ಹೊಗೆಯಿದೆ ಎಂದು ಹೇಳಿದರು. ಇದು ಜನರ ದೇಹದ ಮೇಲೆ ಪರಿಣಾಮ ಬೀರುತ್ತಿದೆ. ಈ ಗಾಳಿಯು ಗರ್ಭಿಣಿಯರ ಭ್ರೂಣಕ್ಕೆ ಅಪಾಯಕಾರಿಯಾಗಿದೆ ಎಂದು ಹೇಳಿದರು.
ದೆಹಲಿ ಸರಕಾರವು ಕೇಂದ್ರ ಸರಕಾರಕ್ಕೆ 5 ರಾಜ್ಯಗಳೊಂದಿಗೆ ತುರ್ತು ಸಭೆ ನಡೆಸುವಂತೆ ಕೋರಿದೆ.

ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ಕೇಂದ್ರ ಸರಕಾರವು ಕೂಡಲೇ ತುರ್ತು ಸಭೆ ನಡೆಸಬೇಕು ಎಂದು ದೆಹಲಿಯ ಆಮ್ ಆದ್ಮಿ ಪಕ್ಷದ ಸರಕಾರದ ಪರಿಸರ ಸಚಿವ ಗೋಪಾಲ ರಾಯ ಇವರು ಆಗ್ರಹಿಸಿದ್ದಾರೆ. ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ದೆಹಲಿ ಮತ್ತು ರಾಜಸ್ಥಾನ ರಾಜ್ಯಗಳೊಂದಿಗೆ ಈ ಸಭೆಯನ್ನು ಆಯೋಜಿಸಲು ಒತ್ತಾಯಿಸಲಾಗಿದೆ.

ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಉತ್ತರ ಕೇಳಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಅದರ ವರದಿ ಸಲ್ಲಿಸುವಂತೆಯೂ ತಿಳಿಸಿದೆ.

  • ಅರಣ್ಯ ಇಲಾಖೆಗೆ ದೆಹಲಿ ಉಚ್ಚನ್ಯಾಯಾಲಯದಿಂದ ಛೀಮಾರಿ !

  • ದೆಹಲಿಯ ವಾಯು ಮಾಲಿನ್ಯಕ್ಕೆ ಅರಣ್ಯ ಇಲಾಖೆಯೇ ಹೊಣೆ !

ಮರ ಕಡಿಯುವ ಒಂದು ಪ್ರಕರಣದ ವಿಚಾರಣೆ ವೇಳೆ ದೆಹಲಿ ಉಚ್ಚನ್ಯಾಯಾಲಯವು ದೆಹಲಿ ರಾಜ್ಯದ ಅರಣ್ಯ ಇಲಾಖೆಗೆ ಛೀಮಾರಿ ಹಾಕಿದೆ. ನ್ಯಾಯಾಲಯವು, ದೆಹಲಿಯ ಜನರು ‘ಗ್ಯಾಸ್ ಚೇಂಬರ್‌’ನಲ್ಲಿ ಉಳಿಯಬೇಕು ಎಂದು ನೀವು ಭಾವಿಸುತ್ತೀರಾ ಎಂದು ಕೇಳಿದೆ. ನಾವು ನಿಮ್ಮನ್ನು ಸಂವೇದನಾಶೀಲಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಮತ್ತು ನೀವು ಅದನ್ನು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ನೀವು ನಿಮ್ಮನ್ನು ಈ ಪ್ರಕರಣದಿಂದ ಪಕ್ಕಕ್ಕೆ ಸರಿಯಲು ಪ್ರಯತ್ನಿಸುವುದು ನ್ಯಾಯಾಲಯದ ಆದೇಶದ ಅಪಮಾನವಾಗಿದೆ. ದೆಹಲಿಯ ಜನರು ಇಂದು ಯಾವ ಸ್ಥಿತಿಯಲ್ಲಿದ್ದಾರೋ ಅದಕ್ಕೆ ನೀವೇ ಜವಾಬ್ದಾರರಾಗಿದ್ದೀರಿ ಎಂದು ಹೇಳಿದೆ.ಏಪ್ರಿಲ್ 2022 ರಲ್ಲಿ, ದೆಹಲಿ ಅರಣ್ಯ ಇಲಾಖೆಯು ವಿವಿಧ ಕಾರಣಗಳಿಗಾಗಿ ರಾಜ್ಯದಲ್ಲಿ ಬೃಹತ್ ಮರಗಳನ್ನು ಕಡಿಯಲು ಆದೇಶಿಸಿತ್ತು. ಇದರ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ಭವರಿನ್ ಕಂಧಾರಿ ದೂರು ದಾಖಲಿಸಿದ್ದಾರೆ. ವಿಚಾರಣೆ ವೇಳೆ ನ್ಯಾಯಾಲಯ ಅರಣ್ಯ ಇಲಾಖೆಗೆ ಮೇಲಿನಂತೆ ಛೀಮಾರಿ ಹಾಕಿದೆ.

ಸಂಪಾದಕೀಯ ನಿಲುವು

ರಾಜಧಾನಿ ದೆಹಲಿಯಲ್ಲಿ ಪ್ರತಿ ವರ್ಷ ಈ ಸಮಯದಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದೆ, ಈ ವಿಷಯ ಎಲ್ಲ ಪಕ್ಷದವರಿಗೂ ತಿಳಿದಿದ್ದರೂ ಮಾಲಿನ್ಯವನ್ನು ದೂರಗೊಳಿಸಲು ಅವರು ಸಂಘಟಿತ ಪ್ರಯತ್ನ ಮಾಡುವುದಿಲ್ಲ ಮತ್ತು ಸಾರ್ವಜನಿಕರು ಕೂಡ ಈ ವಿಷಯದಲ್ಲಿ ಪ್ರಶ್ನಿಸುವುದಿಲ್ಲ,ಈ ಸ್ಥಿತಿ ನಾಚಿಕೆಗೇಡು !