ತೆಲ್ ಅವಿವ್ (ಇಸ್ರೇಲ್) – ಇಸ್ರೇಲ್‌ನ ರಕ್ಷಣಾ ಸಚಿವ ಯೋವ್ ಗಲಾಂಟ್ ಇವರು, ನಾವು ಮೊದಲು ಹಮಾಸ್‌ನ ಮಿಲಿಟರಿ ಸಾಮರ್ಥ್ಯ ಮತ್ತು ಸರಕಾರವನ್ನು ಮುನ್ನಡೆಸುವ ಸಾಮರ್ಥ್ಯವನ್ನು ನಾಶಪಡಿಸುತ್ತೇವೆ, ಎಂದು ಹೇಳಿದ್ದಾರೆ. ಬೇರೆ ಶಬ್ದಗಳಲ್ಲಿ ಹೇಳುವುದಾದರೆ, ನಾವು ಹಮಾಸ್ ಅನ್ನು ಕಿತ್ತೆಸೆಯುತ್ತೇವೆ. ಇದರ ನಂತರ, ಗಾಝಾದಲ್ಲಿ ಹೊಸ ಭದ್ರತಾ ವ್ಯವಸ್ಥೆಯನ್ನು ನಿರ್ಮಾಣ ಮಾಡಲಾಗುವುದು. ಯುದ್ಧವು 3 ಹಂತಗಳಲ್ಲಿ ನಡೆಯುತ್ತದೆ. ನಾವು ಮೊದಲ ಹಂತದಲ್ಲಿದ್ದೇವೆ. ಇದರಲ್ಲಿ ನಾವು ವಾಯುದಾಳಿಗಳ ಮೂಲಕ ಹಮಾಸ್ ನೆಲೆಗಳನ್ನು ನಾಶಪಡಿಸುತ್ತಿದ್ದೇವೆ. ಶೀಘ್ರದಲ್ಲಿ ನಾವು ಭೂಮಿಯ ಮೇಲೆ ಆಕ್ರಮಣ ಮಾಡುವವರಿದ್ದೇವೆ. ಇದರಲ್ಲಿ ಹಮಾಸ್‌ನ ಮೂಲಭೂತ ಸೌಕರ್ಯವನ್ನು ಸಂಪೂರ್ಣವಾಗಿ ನಾಶಪಡಿಸುತ್ತೇವೆ. ಎರಡನೇ ಹಂತದಲ್ಲಿ, ಸೈನಿಕರು ಸಣ್ಣ ದೊಡ್ಡ ಕಾರ್ಯಾಚರಣೆಗಳನ್ನು ಮುಂದುವರೆಸುತ್ತಾರೆ ಮತ್ತು ಹಮಾಸ್ ಗೂಢಚಾರರನ್ನು ಕೊಲ್ಲುತ್ತಾರೆ. ತದ ನಂತರ, ಮೂರನೇ ಹಂತದಲ್ಲಿ, ನಾವು ಗಾಝಾದಲ್ಲಿ ಹೊಸ ಭದ್ರತಾ ವ್ಯವಸ್ಥೆಯನ್ನು ರಚಿಸುತ್ತೇವೆ. ಇದರಲ್ಲಿ ಇಸ್ರೇಲ್ ಯಾವುದೇ ಪಾತ್ರವನ್ನು ಹೊಂದಿರುವುದಿಲ್ಲ ಎಂದು ಹೇಳಿದರು.
ಇಸ್ರೇಲ್ ಮೇಲೆ ಯೆಮೆನ್‌ನ ಹುತಿ ಬಂಡುಕೋರರಿಂದಲೂ ದಾಳಿ
ಇಸ್ರೇಲ್, ಗಾಝಾ ನಗರದಲ್ಲಿರುವ ಅಲ್-ಕುದ್ಸ ಆಸ್ಪತ್ರೆಯನ್ನು ಖಾಲಿ ಮಾಡುವಂತೆ ಆದೇಶಿಸಿದೆ. ಈ ಆಸ್ಪತ್ರೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾವಿರಾರು ಜನರು ಇದ್ದಾರೆ. ಆಸ್ಪತ್ರೆ ಆಡಳಿತವು ಅದನ್ನು ತೆರವು ಮಾಡಲು ನಿರಾಕರಿಸಿದೆ. ಇಸ್ರೇಲ್ ದಾಳಿಯಿಂದ ನಿರಾಶ್ರಿತರಾಗಿರುವ ಸುಮಾರು 12 ಸಾವಿರ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಮತ್ತೊಂದೆಡೆ, ಹಮಾಸ್ ಮತ್ತು ಹಿಜ್ಬುಲ್ಲಾ ಇವರ ಬಳಿಕ ಯೆಮೆನ್‌ನ ಹುತಿ ಬಂಡುಕೋರರು ಕೂಡ ಇಸ್ರೇಲ್ ಮೇಲೆ ದಾಳಿ ಮಾಡಲು ಪ್ರಾರಂಭಿಸಿದ್ದಾರೆ. ಯುದ್ಧವನ್ನು ಸ್ಥಗಿತಗೊಳಿಸುವಂತೆ ಈಜಿಪ್ಟ್ ರಾಷ್ಟ್ರಾಧ್ಯಕ್ಷ ಅಬ್ದೆಲ್ ಫತಾಹ್ ಅಲ್ ಸಿಸಿ ಇವರ ಮುಖಂಡತ್ವದಲ್ಲಿ ಒಂದು ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ; ಆದರೆ ಈ ಸಮ್ಮೇಳನದಲ್ಲಿ ಹಮಾಸ್ ಮತ್ತು ಇಸ್ರೇಲ್‌ನ ಯಾವುದೇ ಪ್ರತಿನಿಧಿಗಳನ್ನು ಸೇರಿಸಲಾಗಿಲ್ಲ.
ಹಮಾಸ್‌ನಿಂದ 2 ಅಮೆರಿಕನ್ ಒತ್ತೆಯಾಳುಗಳ ಬಿಡುಗಡೆ
ಕತಾರ್‌ನ ಹಸ್ತಕ್ಷೇಪದ ನಂತರ, ಭಯೋತ್ಪಾದಕ ಸಂಘಟನೆ ಹಮಾಸ್ ಅಕ್ಟೋಬರ್ 20 ರ ರಾತ್ರಿ ಇಬ್ಬರು ಅಮೇರಿಕನ್ ನಾಗರಿಕರನ್ನು ಬಿಡುಗಡೆಗೊಳಿಸಿತು. ಇವರಿಬ್ಬರೆಂದರೆ ಒರ್ವ ಮಹಿಳೆ ಮತ್ತು ಆಕೆಯ ಮಗಳಾಗಿದ್ದಾರೆ. ಹಮಾಸ್ ಇವರಿಬ್ಬರನ್ನು ರೆಡಕ್ರಾಸ್ ಗೆ ಹಸ್ತಾಂತರಿಸಿದರು. ನಂತರ ರೆಡಕ್ರಾಸ್ ಅವರನ್ನು ಇಸ್ರೇಲ್ ಗೆ ಹಸ್ತಾಂತರಿಸಿತು. ಹಮಾಸ್‌ನಿಂದ ಬಿಡುಗಡೆಯಾದ ನಂತರ, ಜ್ಯುಡಿತ್ ಮತ್ತು ನತಾಲಿ ಇವರು ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ದೂರವಾಣಿಯ ಮುಖಾಂತರ ಚರ್ಚೆ ನಡೆಸಿದರು.
ಸಹಾಯ ಸಾಮಗ್ರಿಗಳು ಗಾಝಾ ತಲುಪಲಿಲ್ಲ !
ಗಾಝಾ ಮತ್ತು ಈಜಿಪ್ಟ್ ಗಡಿಯಲ್ಲಿರುವ ರಫಾಹ ಪ್ರದೇಶದಿಂದ ಗಾಝಾಕ್ಕೆ ಗಡಿ ದಾಟಿ ಸಹಾಯ ಸಾಮಗ್ರಿ ಇರುವ ಟ್ರಕ್‌ಗಳು ಟಲು ಗಾಝಾದಲ್ಲಿ ಹೋಗಲು ಸಾಧ್ಯವಾಗಿಲ್ಲ. ಈ ಬಗ್ಗೆ ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಗಡಿಯಲ್ಲಿ ಈ ಟ್ರಕ್ ಅನ್ನು ಯಾರು ಪರಿಶೀಲಿಸುತ್ತಾರೆ?’, ಎಂದು ಇನ್ನೂ ನಿರ್ಧರಿಸಲಾಗಿಲ್ಲ. ಅಮೇರಿಕಾ ಮತ್ತು ಇಸ್ರೇಲ್ ದೇಶಗಳು ಸಹಾಯ ಸಾಮಗ್ರಿಗಳನ್ನು ಕಳುಹಿಸುವ ಮೊದಲು, ಅದು ಹಮಾಸ್‌ನ ಕೈಗೆ ತಲುಪದಂತೆ ನೋಡಿಕೊಳ್ಳಬೇಕು ಎಂಬ ಷರತ್ತನ್ನು ಹೊಂದಿದೆ.