ಆಪತ್ಕಾಲದಲ್ಲಿ ನಮ್ಮೆಲ್ಲರ ರಕ್ಷಣೆಯಾಗಬೇಕಾದರೆ ಎಲ್ಲರೂ ಈಶ್ವರನ ಭಕ್ತರಾಗಬೇಕು !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

‘ಅನೇಕ ದಾರ್ಶನಿಕರು ಮತ್ತು ಸಂತರು ಹೇಳಿದಂತೆ ಆಪತ್ಕಾಲವು ಪ್ರಾರಂಭವಾಗಿದೆ. ಮುಂಬರುವ ಅತ್ಯಂತ ಭೀಕರ ಆಪತ್ಕಾಲದಿಂದ ಪಾರಾಗಲು “ಎಲ್ಲರೂ ಈಶ್ವರನ ಭಕ್ತಿ ಮಾಡುವುದು”, ಇದೊಂದೇ ಏಕೈಕ ಉಪಾಯವಾಗಿದೆ !

ಭಕ್ತಿಯ ಮೊದಲ ಹೆಜ್ಜೆ ಎಂದರೆ ಜೀವನದಲ್ಲಿ ಪ್ರತಿಯೊಂದು ಕರ್ಮವನ್ನು ಮಾಡುವಾಗ ಈಶ್ವರನ ಬಗ್ಗೆ ಅಂತಃಕರಣದಲ್ಲಿ ಭಾವವನ್ನು ಜಾಗೃತಗೊಳಿಸುವುದು. ಇದಕ್ಕಾಗಿ ನಿತ್ಯ ಸಾಧನೆ ಮಾಡುವುದು ಅವಶ್ಯಕವಾಗಿದೆ. ಗುರುಚರಣಗಳ ಸೇವೆ ಮಾಡುವಾಗ ಗುರು ಸಾನ್ನಿಧ್ಯದಲ್ಲಿ ಜೀವದ ಅಂತಃಕರಣದಲ್ಲಿ ದೇವರ ಬಗ್ಗೆ ತಾನಾಗಿಯೇ ಭಾವವು ಜಾಗೃತವಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಪ್ರಯತ್ನ ಮಾಡಬೇಕಾಗುವುದಿಲ್ಲ. ಗುರುಗಳ ಚರಣಗಳನ್ನು ಬಿಡದಿರುವುದು, ಇದು ಪ್ರತಿಯೊಂದು ಜೀವದ ಅಂತಿಮ ಧ್ಯೇಯವಾಗಿರಬೇಕು. ಕೆಲವರು, “ನಮಗೆ ಗುರುಗಳಿಲ್ಲ”, ಎಂದು ಹೇಳಬಹುದು. ಇಂತಹ ಸಮಯದಲ್ಲಿ “ನಮ್ಮ ಇಷ್ಟದೇವತೆಯೇ ನಮ್ಮ ಗುರು”, ಎಂಬ ಭಾವವನ್ನಿಡಬೇಕು. ಇದರಿಂದ ಪೂರ್ಣ ಜೀವನವೇ ಬದಲಾಗುತ್ತದೆ. ‘ಭಾವವಿದ್ದಲ್ಲಿ ದೇವರು ಎಂಬ ಉಕ್ತಿಯಂತೆ ಸತತವಾಗಿ ದೇವರ ಅನುಸಂಧಾನದಲ್ಲಿರಬಹುದು. ಅನುಸಂಧಾನಕ್ಕೆ ಜೀವನದಲ್ಲಿ ಅಸಾಧಾರಣ ಮಹತ್ವವಿದೆ. ಅನುಸಂಧಾನದಿಂದ ಜೀವಕ್ಕೆ ಮಾಯೆಯ ವಿಸ್ಮರಣೆಯಾಗುತ್ತದೆ ಮತ್ತು ಅವನಿಗೆ ಜೀವನವು ಒಂದು ‘ಆಧ್ಯಾತ್ಮಿಕ ಆನಂದದ ಸಾಗರವಾಗುತ್ತದೆ. ಇದರಿಂದ ವರ್ತಮಾನದಲ್ಲಿ ಅವನ ಮೇಲೆ ಎಷ್ಟೇ ಸಂಕಟಗಳು ಬಂದರೂ, ಅವನು ಅದನ್ನು ನಗುನಗುತ್ತಾ ಎದುರಿಸುತ್ತಾನೆ. ಇದನ್ನೇ ‘ದೇವರಕೃಪೆಯಾಗುವುದು ಅಥವಾ ‘ಗುರುಕೃಪೆಯಾಗುವುದು ಎನ್ನುತ್ತಾರೆ.

ಮನಸ್ಸಿನಲ್ಲಿ ಈಶ್ವರನ ಬಗ್ಗೆ ಅಥವಾ ಗುರುಗಳ ಬಗ್ಗೆ ಭಾವವಿದ್ದರೆ, ‘ಎಲ್ಲವೂ ದೇವರ ಇಚ್ಛೆಯಂತೆಯೇ ನಡೆಯುತ್ತಿದೆ, ಎಂಬ ಶ್ರದ್ಧೆಯು ಮನಸ್ಸಿನಲ್ಲಿ ಮೂಡುತ್ತದೆ. ಆಪತ್ಕಾಲದಲ್ಲಿ ಇದೇ ಶ್ರದ್ಧೆ ಮತ್ತು ಭಕ್ತಿಯು ನಮ್ಮ ಜೀವನದ ಆಧಾರವಾಗುತ್ತದೆ. ಶ್ರದ್ಧೆಯಿಲ್ಲದೆ ಮತ್ತು ಭಕ್ತಿಯಿಲ್ಲದೆ ಜೀವನದ ನೌಕೆಯು ದಾರಿ ತಪ್ಪುತ್ತದೆ.

ಆಪತ್ಕಾಲದಲ್ಲಿ ಭಾವಭಕ್ತಿಯ ಬಲದಿಂದಲೇ ನಾವು ಪಾರಾಗಲು ಸಾಧ್ಯ. ‘ಮೂರನೇ ಮಹಾಯುದ್ಧವು ಭೀಕರವಾಗಿರುತ್ತದೆ, ಎಂದು ಸಂತರ ಹೇಳಿಕೆಯಾಗಿದೆ. ಅದಕ್ಕಾಗಿ ಮೊದಲೇ ಮನಸ್ಸು ಮತ್ತು ಬುದ್ಧಿಯ ಸಿದ್ಧತೆಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ‘ನಿತ್ಯ ಸಾಧನೆ ಮಾಡುವುದು, ಇದೊಂದೇ ಅದಕ್ಕೆ ಉತ್ತಮ ಉಪಾಯವಾಗಿದೆ.

ಈ ಗುರುಪೂರ್ಣಿಮೆಯಂದು ಗುರುಗಳಿಗೆ ಶರಣಾಗಿ ವ್ಯಷ್ಟಿ (ವೈಯಕ್ತಿಕ) ಮತ್ತು ಸಮಷ್ಟಿ (ಸಮಾಜಕ್ಕಾಗಿ) ಸಾಧನೆಯ ಯೋಗ್ಯ ಸಮನ್ವಯ ಸಾಧಿಸಲು ಪ್ರಯತ್ನಿಸಿ ತೀವ್ರ ಸಾಧನೆಯ ಸಂಕಲ್ಪ ಮಾಡೋಣ ! ಗುರುದೇವರು ಖಂಡಿತವಾಗಿಯೂ ನಮ್ಮನ್ನು ಈ ಕಠಿಣ ಕಾಲದಲ್ಲಿ ಪಾರು ಮಾಡುವರು ಎಂಬ ದೃಢ ವಿಶ್ವಾಸ ಇಟ್ಟುಕೊಳ್ಳೋಣ !

ಆಪತ್ಕಾಲದ ಪೂರ್ವಸಿದ್ಧತೆಯೆಂದು ಕೇವಲ ಬಾಹ್ಯ (ಸ್ಥೂಲ) ಸಿದ್ಧತೆ ಮಾತ್ರವಲ್ಲ, ಬದಲಿಗೆ ಭಾವ, ತ್ಯಾಗ, ಶರಣಾಗತಿ ಮತ್ತು ಅಹಂ-ನಿರ್ಮೂಲನೆಯ ಮೂಲಕ ಆಧ್ಯಾತ್ಮಿಕ (ಆತ್ಮಿಕ) ಸಿದ್ಧತೆಯನ್ನೂ ಮಾಡಿಕೊಳ್ಳಿ ! ಹಾಗೆ ಮಾಡಲು ಈ ಗುರುಪೂರ್ಣಿಮೆಯಂದು ದೃಢ ಸಂಕಲ್ಪವನ್ನು ಮಾಡಿ ಮತ್ತು ಒಂದು ಸಾವಿರ ಪಟ್ಟಿನಷ್ಟು ಕಾರ್ಯನಿರತವಾಗಿರುವ ಗುರುತತ್ತ್ವದ ಆಧ್ಯಾತ್ಮಿಕ ಲಾಭವನ್ನು ಪಡೆದುಕೊಳ್ಳಿ !

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರು) (೩೧.೫.೨೦೨೬)