ವಿಶ್ವಸ್ಥ ಹುದ್ದೆಯ ಆನುವಂಶಿಕ ಅಧಿಕಾರವನ್ನು ಹೊಂದಿರುವ ಕುಟುಂಬದ ಸದಸ್ಯರನ್ನು ‘ನೌಕರ’ ಎಂದು ನೇಮಕ ಗೊಳಿಸಬಹುದು ! – ಉಚ್ಚ ನ್ಯಾಯಾಲಯ

ತಿರುವನಂತಪುರಂ (ಕೇರಳ) – ವಂಶಪಾರಂಪರಾಗತ ವಿಶ್ವಸ್ಥ ಹುದ್ದೆ ಅಥವಾ ವಿಶ್ವಸ್ಥ ಹುದ್ದೆಯ ಅನುವಂಶಿಕ ಅಧಿಕಾರವನ್ನು ಹೊಂದಿರುವ ಕುಟುಂಬದ ಸದಸ್ಯರನ್ನು ದೇವಸ್ಥಾನದಲ್ಲಿ ನೌಕರನೆಂದು ನೇಮಿಸಿಕೊಳ್ಳಬಹುದು; ಆದರೆ ಅವರಿಗೆ ನೌಕರಿಗಾಗಿ ಅರ್ಜಿ ಸಲ್ಲಿಸುವ ಮೊದಲು ವಿಶ್ವಸ್ಥ ಹುದ್ದೆಯ ಮೇಲಿನ ತಮ್ಮ ದಾವೆಯನ್ನು ತ್ಯಜಿಸಬೇಕಾಗುತ್ತದೆಯೆಂದು ಕೇರಳ ಉಚ್ಚ ನ್ಯಾಯಾಲಯ ಇತ್ತೀಚೆಗೆ ತನ್ನ ತೀರ್ಪಿನಲ್ಲಿ ಹೇಳಿದೆ.

ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿಜಿ ಅಜಿತ್ಕುಮಾರ್ ಅವರನ್ನೊಳಗೊಂಡ ಖಂಡಪೀಠವು ಅರ್ಜಿಯೊಂದರ ವಿಚಾರಣೆಯ ಸಂದರ್ಭದಲ್ಲಿ, ವಂಶಪರಂಪರಾಗತ ವಿಶ್ವಸ್ಥ ಹುದ್ದೆಯು ಆರ್ಥಿಕ ಭದ್ರತೆ ಒದಗಿಸುವುದಿಲ್ಲ. ಆದುದರಿಂದ ಇಂತಹ ಕುಟುಂಬದ ಸದಸ್ಯರು ದೇವಸ್ಥಾನದಲ್ಲಿ ನೌಕರಿಯನ್ನು ಹುಡುಕಬಹುದು ಮತ್ತು ಅವರು ನೌಕರಿಗಾಗಿ ಅರ್ಜಿ ಸಲ್ಲಿಸಲು ಹಿಂದೂ ಧಾರ್ಮಿಕ ಮತ್ತು ಧರ್ಮದಾಯಿ ದತ್ತಿ ಕಾಯಿದೆಯ ಅಡಿಯಲ್ಲಿ ಯಾವುದೇ ಕಾನೂನು ನಿರ್ಬಂಧವಿಲ್ಲವೆಂದು ತಿಳಿಸಿದೆ.

ಇಲ್ಲಿರುವ ಶ್ರೀ ಕುರುಂಬಾ ಭಗವತಿ ದೇವಸ್ಥಾನವು ಮಲಬಾರ್ ದೇವಸ್ವೋಂ ಮಂಡಳಿಯ ವತಿಯಿಂದ ಆಡಳಿತ ನಡೆಸಲ್ಪಡುವ ಒಂದು ಧಾರ್ಮಿಕ ಸಂಸ್ಥೆಯಾಗಿದೆ. ಈ ದೇವಾಲಯದ ನೌಕರಿಯ ಹುದ್ದೆಗಳಿಗಾಗಿ ನೀಡಿರುವ ಅರ್ಜಿಗಳ ಜಾಹೀರಾತಿನ ಅಧಿಸೂಚನೆಯಲ್ಲಿ, ಒಂದು ಹುದ್ದೆಗೆ ‘ಕವಲ್’ ಅಲಿಯಾಸ್ `ಕಥಾನ ವೇದಿಕರಣ’ಗಾಗಿ ಇತ್ತು. ಇದು ಶಾಶ್ವತವಾದ ಅನುವಂಶಿಕವಲ್ಲದ ಹುದ್ದೆಯಾಗಿತ್ತು. ಈ ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯ ಕುರಿತು ಉಚ್ಚ ನ್ಯಾಯಾಲಯವು ಈ ತೀರ್ಪು ನೀಡಿದೆ.