ನೇಪಾಳದಲ್ಲಿ ವಿಮಾನ ಅಪಘಾತ: ಇಲ್ಲಿಯ ವರೆಗೆ ೭೨ರಲ್ಲಿ ೬೮ ಜನರ ಶವ ಪತ್ತೆಯಾಗಿದೆ !

ಕಾಠಮಾಂಡೂ (ನೇಪಾಳ) – ‘ಯತಿ ಎರ್‌ಲೈನ್ಸ್‌‘ನ ‘ಎಟಿಆರ್-೭೨’ ವಿಮಾನವು ಜನವರಿ ೧೫ರಂದು ಬೆಳಿಗ್ಗೆ ೮ ಗಂಟೆಯ ಸುಮಾರು ನೇಪಾಳದ ಪೋಖರಾ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿರುವಾಗ ಬೆಟ್ಟಕ್ಕೆ ಅಪ್ಪಳಿಸಿ ಕಣಿವೆಗೆ ಉರುಳಿ ಬೆಂಕಿ ಹತ್ತಿಕೊಂಡಿತು. ಈ ವಿಮಾನದಲ್ಲಿ ೬೮ ಪ್ರವಾಸಿಗಳೊಂದಿಗೆ ೪ ನೌಕರರಿದ್ದರು. ಅವರಲ್ಲಿ ೬೮ ಜನರ ಮೃತದೇಹಗಳು ದೊರೆತಿವೆ. ಉಳಿದವರನ್ನು ಹುಡುಕಾಟ ನಡೆಯುತ್ತಿದೆ. ‘ಯತಿ ಎರ್ ಲೈನ್ಸ್’ನ ವಕ್ತಾರ ಸುದರ್ಶನ ಬರತೌಲಾರವರು ಮಾತನಾಡುತ್ತ, “ಈ ಅಪಘಾತದ ನಂತರ ಇಲ್ಲಿಯವರೆಗೆ ವಿಮಾನದಲ್ಲಿನ ಒಬ್ಬ ವ್ಯಕ್ತಿಯನ್ನೂ ಜೀವಂತವಾಗಿ ಹೊರಗೆ ತೆಗೆಯಲು ಸಾಧ್ಯವಾಗಿಲ್ಲ. ”ಇಲ್ಲಿ ಸಹಾಯ ಕಾರ್ಯವನ್ನು ಮಾಡುವವರ ಅಭಿಪ್ರಾಯದಂತೆ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರೂ ಮೃತರಾಗಿರುವ ಸಾಧ್ಯತೆಯಿದೆ. ಈ ಘಟನೆಯ ವಿಡಿಯೋ ಕೂಡ ಬಂದಿದೆ. ಈ ಅಪಘಾತ ನಿಜವಾಗಿಯೂ ಯಾವ ಕಾರಣದಿಂದಾಗಿ ಆಗಿದೆ, ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ. ನೇಪಾಳದ ಪ್ರಧಾನಮಂತ್ರಿ ಪುಷ್ಪ ಕಮಲ ದಹಲರವರು ಅಪಘಾತದ ನಂತರ ಮಂತ್ರಿಮಂಡಳದ ಆಪತ್ಕಾಲಿಕ ಸಭೆ ನಡೆಸಿದರು. ಇದರೊಂದಿಗೆ ಘಟನಾಸ್ಥಳಕ್ಕೆ ಸೈನ್ಯವನ್ನೂ ಕಳುಹಿಸಲಾಯಿತು. ಈಗ ಅಲ್ಲಿ ಸೈನ್ಯದಿಂದ ಸಹಾಯ ಕಾರ್ಯ ನಡೆಯುತ್ತಿದೆ.

೧. ವಿಮಾನದಲ್ಲಿದ್ದ ೬೮ ಪ್ರವಾಸಿಗಳಲ್ಲಿ ನೇಪಾಳದ ೫೩, ಭಾರತದ ೫, ರಷ್ಯಾದ ೪, ಆಯರ್ಲೇಂಡಿನ ೧, ದಕ್ಷಿಣ ಕೊರಿಯಾದ ೨, ಫ್ರಾನ್ಸಿನ ೧, ಅಫಘಾನಿಸ್ತಾನದ ೧, ಹಾಗೂ ಇತರ ದೇಶದಿಂದ ಒಬ್ಬರ ಸೇರಿದ್ದರು. ಇದರಲ್ಲಿ ೩ ಹಸುಳೆಗಳು, ಹಾಗೂ ೩ ಮಕ್ಕಳು ಕೂಡ ಇದ್ದರು.

೨. ನೇಪಾಳದಲ್ಲಿ ಕಳೆದ ವರ್ಷ ಮೇ ತಿಂಗಳಲ್ಲಿಯೂ ವಿಮಾನ ಅಪಘಾತ ನಡೆದಿತ್ತು. ಅದರಲ್ಲಿ ೧೯ ಪ್ರವಾಸಿಗಳೊಂದಿಗೆ ೩ ನೌಕರರ ಸಾವು ಸಂಭವಿಸಿದೆ. ಇದರಲ್ಲಿ ೪ ಭಾರತೀಯರೂ ಇದ್ದರು.