ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ ಅವರಿಗೆ ಬೆದರಿಕೆ

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ರಾಮ ರಹೀಮ ಅವರ ಭಕ್ತರಿಂದ ಬೆದರಿಕೆಗಳು ಬರುತ್ತಿವೆ ಎಂದು ಮಲಿವಾಲ ಅವರ ಆರೋಪ

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ ಮತ್ತು ಡೇರಾ ಸಚ್ಚಾ ಸೌದಾ ಮುಖ್ಯಸ್ಥ ರಾಮ ರಹೀಮ

ನವ ದೆಹಲಿ : ಡೇರಾ ಸಚ್ಚಾ ಸೌದಾ ಮುಖ್ಯಸ್ಥ ರಾಮ ರಹೀಮ ಅವರ ಭಕ್ತರು ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ ಆರೋಪಿಸಿದರು. ರಾಮ ರಹೀಮ ಅಥವಾ ಅವರ ಡೇರಾ ಸಚ್ಚಾ ಸೌದಾ ಸಂಪ್ರದಾಯದವರಿಂದ ಈ ಆರೋಪಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿವಿಧ ಅಪರಾಧಗಳಿಂದ ಶಿಕ್ಷೆ ಅನುಭವಿಸುತ್ತಿರುವ ರಾಮ ರಹೀಮ ಅವರು ಇತ್ತೀಚೆಗೆ ೪೦ ದಿನಗಳ ‘ಪೆರೋಲ್’ ಮೇಲೆ ಬಿಡುಗಡೆಯಾಗಿದ್ದಾರೆ. ಪೆರೋಲ್ ಎಂದರೆ ಖೈದಿಯನ್ನು ಉತ್ತಮ ನಡವಳಿಕೆಗಾಗಿ ನಿರ್ದಿಷ್ಟ ದಿನಗಳವರೆಗೆ ಷರತ್ತುಗಳ ಮೇಲೆ ಬಿಡುಗಡೆ ಮಾಡಲಾಗುತ್ತದೆ. ರಾಮ ರಹೀಮ ಅವರಿಗೆ ಪೆರೋಲ್ ನೀಡುವ ಬಗ್ಗೆ ಸ್ವಾತಿ ಮಲಿವಾಲ ಹರಿಯಾಣ ಸರಕಾರವನ್ನು ಪ್ರಶ್ನಿಸಿದ್ದಾರೆ ಹಾಗೂ ಪ್ರಧಾನಿ ಮೋದಿ ಪೆರೋಲ್ ನಿಯಮಗಳಲ್ಲಿ ಬದಲಾವಣೆಗೆ ಮಾಡಲು ಸೂಚಿಸಿದ್ದಾರೆ.

ಸ್ವಾತಿ ಮಲಿವಾಲ ಬೆದರಿಕೆಯ ಕುರಿತು ಟ್ವೀಟ್ ಮಾಡಿ, ದೇವರು ನನ್ನನ್ನು ಕಾಪಾಡುತ್ತಾನೆ. ಇಂತಹ ಬೆದರಿಕೆಗಳಿಗೆ ನಾನು ಮಣಿಯುವುದಿಲ್ಲ. ನಾನು ಸತ್ಯದ ಪರವಾಗಿ ಮಾತನಾಡುವುದನ್ನು ಮುಂದುವರಿಸುತ್ತೇನೆ. ಧೈರ್ಯವಿದ್ದರೆ ಮುಂದೆ ಬಂದು ಶೂಟ್ ಮಾಡಿ ಎಂದು ಹೇಳಿದ್ದಾರೆ.