ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರ ದೇಹತ್ಯಾಗ !

ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ

ನವದೆಹಲಿ – ಬದರಿನಾಥದಲ್ಲಿ ಜ್ಯೋತಿಷ ಮತ್ತು ದ್ವಾರಕಾದಲ್ಲಿ ಶಾರದಾ ಎಂಬ ಎರಡು ಪೀಠಗಳ ಶಂಕರಾಚಾರ್ಯರಾದ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಸೆಪ್ಟೆಂಬರ್ ೧೧ ರಂದು ಮಧ್ಯಾಹ್ನ ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯ ಜೋತೇಶ್ವರ ದೇವಸ್ಥಾನದಲ್ಲಿ ದೇಹತ್ಯಾಗ ಮಾಡಿದರು. ಅವರಿಗೆ ೯೯ ವರ್ಷದವರಾಗಿದ್ದರು ಅವರು ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ೯೯ ನೇ ಹುಟ್ಟುಹಬ್ಬವನ್ನು ಇತ್ತೀಚೆಗೆ ಸೆಪ್ಟೆಂಬರ್ ೩ ರಂದು ಆಚರಿಸಲಾಗಿತ್ತು. ಅವರು ಬ್ರಹ್ಮಲೀನರಾಗುವಾಗ ಅವರ ಅನೇಕ ಶಿಷ್ಯರು ಮತ್ತು ಭಕ್ತರು ಅವರೊಂದಿಗೆ ಇದ್ದರು. ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ರಾಮಮಂದಿರ ಜೀರ್ಣೋದ್ಧಾರಕ್ಕಾಗಿ ನ್ಯಾಯಾಲಯದ ಹೋರಾಟದಲ್ಲಿ ಸಾಕಷ್ಟು ಕೆಲಸ ಮಾಡಿದ್ದರು.

ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯವರ ಕಿರು ಪರಿಚಯ !

ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಮಧ್ಯಪ್ರದೇಶದ ಸಿವಾನಿಯ ದಿಘೋರಿ ಗ್ರಾಮದಲ್ಲಿ ಉಪಾಧ್ಯಾಯ ಎಂಬ ಕುಟುಂಬದಲ್ಲಿ ಜನಿಸಿದರು. ಅವರ ತಂದೆತಾಯಿಗಳು ಅವರಿಗೆ ‘ಪೋಥಿರಾಮ್’ ಎಂದು ಹೆಸರಿಟ್ಟರು. ೯ ನೇ ವಯಸ್ಸಿನಲ್ಲಿ, ಅವರು ಮನೆಯನ್ನು ತೊರೆದರು ಮತ್ತು ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅವರು ಕಾಶಿಗೆ ಹೋಗಿ ಮಹಾನ್ ಸಂತ ಧರ್ಮಸಾಮ್ರಾಟ ಶ್ರೀ ಕರಪಾತ್ರಿ ಸ್ವಾಮೀಜಿ ಮಹಾರಾಜರಿಂದ ವೇದಗಳನ್ನು ಅಧ್ಯಯನ ಮಾಡಿದರು. ೧೯೪೨ ರಲ್ಲಿ, ಅವರು ಕೇವಲ ೧೯ ವರ್ಷ ವಯಸ್ಸಿನವರಾಗಿದ್ದಾಗ, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರಿಂದ ‘ಕ್ರಾಂತಿಕಾರಿ ಸಾಧು’ ಎಂಬ ಹೆಸರಿನೊಂದಿಗೆ ಜನಪ್ರಿಯರಾದರು. ವಾರಣಾಸಿಯಲ್ಲಿ ೯ ತಿಂಗಳು ಹಾಗೂ ಮಧ್ಯಪ್ರದೇಶದಲ್ಲಿ ೬ ತಿಂಗಳು ಕಾರಾಗೃಹವಾಸದ ಶಿಕ್ಷೆಯನ್ನು ಅನುಭವಿಸಿದ್ದರು.

೧೯೫೦ ರಲ್ಲಿ, ಜ್ಯೋತಿಷಪೀಠದ ಬ್ರಹ್ಮಲೀನ ಶಂಕರಾಚಾರ್ಯ ಸ್ವಾಮಿ ಬ್ರಹ್ಮಾನಂದ ಸರಸ್ವತಿಯವರಿಂದ ಬ್ರಹ್ಮದಂಡವನ್ನು ಪ್ರದಾನಿಸಿ ಸನ್ಯಾಸ ದೀಕ್ಷೆ ನೀಡಲಾಗಿತ್ತು. ಆಗ ಅವರಿಗೆ ‘ಸ್ವಾಮಿ ಸ್ವರೂಪಾನಂದ ಸರಸ್ವತಿ’ ಎಂದು ನಾಮಕರಣ ಮಾಡಲಾಯಿತು. ೧೯೮೧ ರಲ್ಲಿ ಅವರು ಶಂಕರಾಚಾರ್ಯ ಪದವಿಯಲ್ಲಿ ವಿರಾಜಮಾನರಾದರು.

ಹಿಂದೂ ಧರ್ಮಕ್ಕಾಗಿ ಧಗಧಗಿಸುವ ಬ್ರಾಹ್ಮತೇಜದ ಜ್ವಾಲೆ ಶಾಂತವಾಯಿತು ! – ಸನಾತನ ಸಂಸ್ಥೆ

ಮುಂಬೈ – ದ್ವಾರಕಾದ ಶಾರದಾಪೀಠ ಮತ್ತು ಬದ್ರಿಕಾಶ್ರಮದ ಜ್ಯೋತಿಷ್ಯಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಮಹಾರಾಜರ ದೇಹತ್ಯಾಗದಿಂದಾಗಿ ಹಿಂದೂ ಧರ್ಮಕ್ಕಾಗಿ ಧಗಧಗಿಸುತ್ತಿದ್ದ ಬ್ರಾಹ್ಮತೇಜದ ಜ್ವಾಲೆಯು ಶಾಂತವಾಯಿತು, ಎಂದು ಭಾವಪೂರ್ಣ ಮಾತುಗಳಲ್ಲಿ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸರವರು ಶಂಕರಾಚಾರ್ಯರ ಚರಣಗಳಲ್ಲಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಅವರು ಧರ್ಮಸಾಮ್ರಾಟ ಕರಪಾತ್ರಿಸ್ವಾಮಿಯವರ ಶಿಷ್ಯೋತ್ತಮರಾಗಿ ತಮ್ಮ ಜೀವನದುದ್ದಕ್ಕೂ ಹಿಂದೂ ಧರ್ಮದ ಪ್ರಚಾರ ಮತ್ತು ಧರ್ಮರಕ್ಷಣೆಗಾಗಿ ತಮ್ಮ ಜೀವನವನ್ನು ಸಮರ್ಪಿಸಿದರು. ಆದಿ ಶಂಕರಾಚಾರ್ಯರ ಪರಂಪರೆಯಲ್ಲಿದ್ದ ನಾಲ್ಕು ಪೀಠಗಳಲ್ಲಿ ಎರಡು ಪೀಠಗಳ ಶಂಕರಾಚಾರ್ಯರ ಪದವಿಯನ್ನು ಧರ್ಮಶ್ರದ್ಧೆಯಿಂದ ನಿಭಾಯಿದಿದರು. ಅವರು ವಿವಿಧ ಹಿಂದೂ ಮತ್ತು ಆಧ್ಯಾತ್ಮಿಕ ಸಂಘಟನೆಗಳಿಗೆ ಆಧಾರಪುರುಷರಾಗಿದ್ದರು.
೨೦೧೫ ನೇ ಇಸವಿಯಲ್ಲಿ, ಕಾ. ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಮೇಲೆ ಬೇಜವಾಬ್ದಾರಿಯಿಂದ ಆರೋಪಗಳಾದಾಗ ಸ್ವತಃ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯವರು ನಾಸಿಕನ ಕುಂಭಮೇಳದಲ್ಲಿ ಸನಾತನ ಸಂಸ್ಥೆಯು ನಿರಪರಾಧಿಯೆಂದು ಮಾಧ್ಯಮಗಳ ಮುಂದೆ ದೃಢವಾಗಿ ಮಂಡಿಸಿದ್ದರು. ಅಲ್ಲದೇ ಕಾಲಕಾಲಕ್ಕೆ ಸನಾತನ ಸಂಸ್ಥೆಯ ಕಾರ್ಯಕ್ಕೆ ಶುಭಾಶೀರ್ವಾದ ನೀಡಿ ಆಧ್ಯಾತ್ಮಿಕ ಬಲವನ್ನು ಪ್ರದಾನಿಸಿದ್ದರು. ಭಾರತದಲ್ಲಿ ಸರ್ವಶ್ರೇಷ್ಠವಾಗಿರುವ ಶಂಕರಾಚಾರ್ಯಪದವಿಯಲ್ಲಿ ಆರೂಢರಾಗಿ ಅವರು ಮಾಡಿದ ಶ್ರೇಷ್ಠ ಕಾರ್ಯವನ್ನು ಇತಿಹಾಸವು ಗಮನದಲ್ಲಿಡುವುದು, ಎಂದು ಶ್ರೀ. ರಾಜಹಂಸರವರು ಹೇಳಿದ್ದಾರೆ.