ಒಪ್ಪಿಗೆಯಿಂದ ಶಾರೀರಿಕ ಸಂಬಂಧವನ್ನಿಡುವುದು ಬಲಾತ್ಕಾರವಲ್ಲ ! – ಕೇರಳ ಉಚ್ಚ ನ್ಯಾಯಾಲಯ

ತಿರುವನಂತಪುರಮ್‌ (ಕೇರಳ) – ಭಾರತೀಯ ದಂಡ ಸಂಹಿತೆಯ ಕಲಮ್‌ ೩೭೬ರ ಅನ್ವಯ ಇಬ್ಬರು ಪ್ರೌಢ ವ್ಯಕ್ತಿಗಳು ಪರಸ್ಪರ ಒಪ್ಪಿಗೆಯಿಂದ ಇಟ್ಟಿರುವ ಶಾರೀರಿಕ ಸಂಬಂಧವು ಬಲಾತ್ಕಾರವಾಗುವುದಿಲ್ಲ. ಇಂತಹ ಸಂಬಂಧಕ್ಕಾಗಿ ಆ ವ್ಯಕ್ತಿಯ ಒಪ್ಪಿಗೆಯನ್ನು ಮೋಸದಿಂದ ಅಥವಾ ಸುಳ್ಳು ಮಾಹಿತಿಯನ್ನು ನೀಡಿ ಪಡೆದಿದ್ದರೆ, ಆಗ ಅದು ಬಲಾತ್ಕಾರವೆಂದು ನಿರ್ಧರಿಸಲ್ಪಡುತ್ತದೆ, ಎಂದು ಕೇರಳದ ಉಚ್ಚ ನ್ಯಾಯಾಲಯವಿ ಒಂದು ಖಟ್ಲೆಯ ಆಲಿಕೆಯ ಸಮಯದಲ್ಲಿ ಹೇಳಿದೆ. ಈ ಪ್ರಕರಣದಲ್ಲಿನ ಆರೋಪಿಗೆ ನ್ಯಾಯಾಲಯವು ಜಾಮೀನು ನೀಡಲು ಒಪ್ಪಿದೆ. ಆರೋಪಿ ನ್ಯಾಯವಾದಿ ನವನೀತ ನಾಥ (ವಯಸ್ಸು ೨೯)ಇವರು ಓರ್ವ ಮಹಿಳಾ ನ್ಯಾಯವಾದಿಗೆ ವಿವಾಹದ ಆಶ್ವಾಸನೆಯನ್ನು ನೀಡಿ ಆಕೆಯ ಮೇಲೆ ವಿವಿಧ ಕಡೆಗಳಲ್ಲಿ ಬಲಾತ್ಕಾರ ಮಾಡಿರುವ ಹಾಗೂ ಅನಂತರ ಇನ್ನೊಂದು ಮಹಿಳೆಯೊಂದಿಗೆ ವಿವಾಹವಾಗುವ ನಿರ್ಣಯ ತೆಗೆದುಕೊಂಡಿರುವುದು ಈ ಆರೋಪವಾಗಿದೆ.

ನ್ಯಾಯಾಲಯವು ಹೇಳುವಂತೆ, ಸ್ವೇಚ್ಛೆಯಿಂದ ಲೈಂಗಿಕ ಸಂಬಂಧವನ್ನು ಇಟ್ಟಿರುವ ವ್ಯಕ್ತಿಯು ನಂತರ ಆ ವ್ಯಕ್ತಿಯೊಂದಿಗೆ ಮದುವೆಯಾಗಲು ಸಾಧ್ಯವಾಗದಿದ್ದರೆ ಹಾಗೂ ಇಂತಹ ಸಂಬಂಧಕ್ಕಾಗಿ ನೀಡಲಾಗುವ ಒಪ್ಪಿಗೆಯಲ್ಲಿ ಯಾವುದೇ ಸುಳ್ಳುತನ ಕಂಡುಬರದಿದ್ದರೆ ಅದು ಬಲಾತ್ಕಾರವಾಗಲು ಸಾಧ್ಯವಿಲ್ಲ. ಲೈಂಗಿಕ ಸಂಬಂಧದ ನಂತರ ವಿವಾಹಕ್ಕೆ ನಿರಾಕಣೆ ಅಥವಾ ಈ ಸಂಬಂಧದ ಅಂತಿಮ ಸ್ವರೂಪವು ವಿವಾಹವಾಗಲು ಸಾಧ್ಯವಾಗದಿರುವುದು, ಆ ಸಂಬಂಧವನ್ನು ಬಲಾತ್ಕಾರದ ವ್ಯಾಖ್ಯೆಯಲ್ಲಿ ತರಲು ಸಾಕಾಗುವುದಿಲ್ಲ. ವಿವಾಹದ ಆಶ್ವಾಸನೆಯನ್ನು ದುರುದ್ದೇಶದಿಂದ, ಹಾಗೆಯೇ ಅದರ ಪಾಲನೆಯಾಗದಿರುವುದನ್ನೇ ತಿಳಿದು ನೀಡಲಾಗಿದ್ದರೆ ಮಾತ್ರ ಆ ಸಂಬಂಧವು ಬಲಾತ್ಕಾರವೆಂದು ನಿರ್ಧರಿತವಾಗುತ್ತದೆ, ಎಂದು ಸ್ಪಷ್ಟಪಡಿಸಿದೆ.